ರಾಮನಗರ: ರಾಜ್ಯ ವಿಧಾನಸಭೆ ಚುನಾವಣ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಮತ್ತೊಂದೆಡೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಗಳು ಆಗುತ್ತಲೇ ಇವೆ. ಹಾಗೆಯೇ ಪದ್ಮನಾಭ ನಗರದಲ್ಲಿ ಆರ್.ಆಶೋಕ್ ವಿರುದ್ಧ ಯಾರೇ ಬಂದರೂ ಸ್ವಾಗತ, ಪದ್ಮನಾಭ ನಗರ ಹಾಗೂ ಕನಕಪುರ ಎರಡು ಕ್ಷೇತ್ರಗಳಲ್ಲಿ ಆರ್.ಆಶೋಕ್ ಗಲವು ಖಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್ ಆಶ್ವತ್ಥ್ ನಾರಾಯಣ್ ಭವಿಷ್ಯ ನುಡಿದರು.
ರಾಮನಗರದ ಬಿಜೆಪಿ ಅಭ್ಯರ್ಥಿ ಗೌತಮ್ ಗೌಡ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಡಾ.ಸಿ.ಎನ್.ಆಶ್ವತ್ಥ್ ನಾರಾಯಣ್, ಪದ್ಮನಾಭನಗರ ಕ್ಷೇತ್ರದಲ್ಲಿ ಸಂಸದ ಡಿ.ಕೆ.ಸುರೇಶ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಲು ಮುಂದಾಗಿರುವುದಕ್ಕೆ ಪ್ರತಿಕ್ರಿಯಿಸಿ, ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ. ಪದ್ಮನಾಭನಾಗರಕ್ಕೆ ಯಾರು ಬೇಕಾದರೂ ಬರಬಹುದು ಸ್ವಾಗತಾರ್ಹ ಎಂದರು.
ಪದ್ಮನಾಭನಗರದಲ್ಲಿ ಪ್ರಜಾಪ್ರಭುತ್ವ ಉಳಿಸಬೇಕಾಗಿದೆ ಎಂದ ಡಿ.ಕೆ. ಸಹೋದರರ ಹೇಳಿಕೆಗೆ ಟಾಂಗ್ ಕೊಟ್ಟ ಸಚಿವ ಅಶ್ವತ್ಥ್ ನಾರಾಯಣ.
ಪ್ರಜಾಪ್ರಭುತ್ವ ಉಳಿಸಬೇಕಾಗಿರುವುದು ಪದ್ಮನಾಭನಗರದಲ್ಲಿ ಅಲ್ಲ. ಮೊದಲು ರಾಜ್ಯದಲ್ಲೇ ಹಿಂದುಳಿದ ತಾಲೂಕು ಎಂಬ ಪಟ್ಟಿ ಕಟ್ಟಿಕೊಂಡಿರುವ ಕನಕಪುರದಲ್ಲಿ ಅಭಿವೃದ್ಧಿಗಳು ಆಗಲಿ. ಹೀಗೆ ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸಬೇಕು ಅಂದರೆ ಆರ್.ಆಶೋಕ್ ಜಯಗಳಿಸಬೇಕು ಎಂದರು.
ಸಂವಿಧಾನ ಜನರಿಗೆ ಕೊಟ್ಟಿರುವ ಆಶೋತ್ತರಗಳನ್ನು ಉಳಿಸಿಕೊಳ್ಳಬೇಕು. ರಿಪಬ್ಲಿಕ್ ಆಪ್ ಕನಕಪುರ ಎಂಬ ವಾತವರಣದಿಂದ ಜನರನ್ನು ಹೊರಗಡೆ ತರಬೇಕು. ಕನಕಪುರದ ಜನರಿಗೆ ಸ್ವಾತಂತ್ರ್ಯ ಸಿಗಬೇಕು. ಕನಕಪುರ ಕ್ಷೇತ್ರದಲ್ಲಿ ಡಿ.ಕೆ.ಬ್ರದರ್ಸ್ಗೆ ಎಷ್ಟು ವಿರೋಧ ಇದೆ ಎಂಬುದು ಮೇ 13 ರಂದು ಬರುವ ಚುನಾವಣೆ ಫಲಿತಾಂಶದಲ್ಲಿ ಗೊತ್ತಾಗಲಿದೆ ಎಂದು ಹೇಳಿದರು.