ಹಾಸನ: ಜೆಡಿಎಸ್ ಭದ್ರಕೋಟೆ ಹಾಸನ ಜಿಲ್ಲಾ ರಾಜಕೀಯಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಹಾಸನದ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ವಿರುದ್ಧ ಹೊಳೆನರಸೀಪುರದಲ್ಲಿ ಮಾಜಿ ಸಚಿವ ಎಚ್ಡಿ ರೇವಣ್ಣ ವಿರುದ್ಧ ಸ್ಪರ್ಧಿಸುವ ಸಾಧ್ಯತೆ ಇದೆ. ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಗುರುವಾರ ಹೊಳೆನರಸೀಪುರದಲ್ಲಿ ಪ್ರೀತಂ ಗೌಡ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಈ ಮೂಲಕ ಎಚ್ಡಿ ರೇವಣ್ಣ ವಿರುದ್ಧ ಪ್ರೀತಂ ಗೌಡ ಬಹಿರಂಗವಾಗಿಯೇ ತೊಡೆತಟ್ಟಿದಂತಾಗುತ್ತದೆ.
ಈಗಾಗಲೇ ಪ್ರೀತಂ ಗೌಡ ಅವರಿಗೆ ಹಾಸನ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲಾಗಿದ್ದು, ಅವರ ನೇತೃತ್ವದಲ್ಲಿಯೇ ಹಾಸನ ಜಿಲ್ಲೆಯಲ್ಲಿ ಬಿಜೆಪಿ ಚುನಾವಣೆ ಎದುರಿಸುತ್ತಿದೆ. ಹೊಳೆನರಸೀಪುರದಲ್ಲಿ ದೇವರಾಜೇಗೌಡ ಎಂಬುವವರಿಗೆ ಟಿಕೆಟ್ ಅನ್ನು ಈಗಾಗಲೇ ಬಿಜೆಪಿ ಘೋಷಿಸಿದೆ. ಆದರೆ, ಈಗ ಪ್ರೀತಂ ಗೌಡ ಕೂಡ ಹೊಳೆನರಸೀಪುರದಲ್ಲಿ ನಾಮಪತ್ರ ಸಲ್ಲಿಕೆಗೆ ಮುಂದಾಗಿರುವುದು ಹಾಸನ ರಾಜಕೀಯಕ್ಕೆ ಟ್ವಿಸ್ಟ್ ಸಿಕ್ಕಂತಾಗಿದೆ.
ಜೆಡಿಎಸ್ ಭದ್ರಕೋಟೆಯಾಗಿರುವ ಹಾಸನ ಜಿಲ್ಲೆಯಲ್ಲಿ ಕಳೆದ ಬಾರಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳಿ, ಪ್ರೀತಂ ಗೌಡ ಶಾಸಕರಾಗಿ ಆಯ್ಕೆಯಾಗಿದ್ದರು. ಈಗ ಬೇರೆ ಕ್ಷೇತ್ರಗಳಲ್ಲಿಯೂ ಕಮಲ ಅರಳಿಸಲು ಮುಂದಾಗಿರುವ ಬಿಜೆಪಿ ಹೈಕಮಾಂಡ್ ಎಚ್ಡಿ ರೇವಣ್ಣ ವಿರುದ್ಧ ಹೊಳೆನರಸೀಪುರದಲ್ಲಿ ಪ್ರೀತಂ ಗೌಡರನ್ನು ಕಣಕ್ಕಿಳಿಸಲು ಮುಂದಾಗಿದೆ. ಈ ಮೂಲಕ ಜೆಡಿಎಸ್ಗೆ ಟಫ್ ಫೈಟ್ ನೀಡಲು ಬಿಜೆಪಿ ಮುಂದಾಗಿದೆ
ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸ್ತಾರಾ ಪ್ರೀತಂ ಗೌಡ?
ಈಗಾಗಲೇ ಸಚಿವರಾದ ಆರ್ ಅಶೋಕ್ ಮತ್ತು ವಿ ಸೋಮಣ್ಣ ಅವರನ್ನು ತಲಾ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಕಣಕ್ಕಿಳಿಸಿದೆ. ಆರ್ ಅಶೋಕ್ ತಮ್ಮ ಸ್ವಕ್ಷೇತ್ರ ಪದ್ಮನಾಭನಗರ ಮತ್ತು ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ಡಿಕೆ ಶಿವಕುಮಾರ್ ಅವರನ್ನು ಎದುರಿಸುತ್ತಿದ್ದಾರೆ. ಇನ್ನೂ ವಿ ಸೋಮಣ್ಣ ಅವರು ತಮ್ಮ ಸ್ವಕ್ಷೇತ್ರ ಗೋವಿಂದರಾಜನಗರ ಬಿಟ್ಟು ಈ ಸಲ ಚಾಮರಾಜನಗರ ಹಾಗೂ ವರುಣಾದಲ್ಲಿ ಸ್ಪರ್ಧಿಸುತ್ತಿದ್ದಾರೆ. ಈಗ ಪ್ರೀತಂ ಗೌಡ ಕೂಡ ಹಾಸನದ ಜೊತೆಗೆ ಹೊಳೆನರಸೀಪುರದಲ್ಲಿ ಸ್ಪರ್ಧಿಸ್ತಾರಾ ಎಂಬುದು ಕುತೂಹಲ.