ಬೇಲೂರು: ಗುರುವಾರ ಮಧ್ಯಾಹ್ನ ಗುಡುಗು, ಸಿಡಿಲಿನೊಂದಿಗೆ ಮಳೆ ಸುರಿದಿದ್ದು, ಇಲ್ಲಿನ ಚನ್ನಕೇಶವ ದೇವಾಲಯದ ಮೇಲ್ಭಾಗದ ಕಳಸದ ಪಕ್ಕವಿರುವ ಎರಡು ಕೊಂಬುಗಳಲ್ಲಿ ಒಂದು ಭಾಗಕ್ಕೆ ಸಿಡಿಲು ಬಡಿದ ಪರಿಣಾಮ ಹಾನಿಯಾಗಿದ್ದು, ಬಿರುಕು ಬಿಟ್ಟಿದೆ.ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಹಶೀಲ್ದಾರ್ ಎಂ. ಮಮತಾ, ‘ಪುರಾತತ್ವ ಇಲಾಖೆಯವರಿಗೆ ಮಾಹಿತಿ ನೀಡಲಾಗಿದ್ದು, ಮುಂದಿನ ಕ್ರಮವನ್ನು ಜರುಗಿಸಲು ತಿಳಿಸಲಾಗಿದೆ’ ಎಂದರು.
ದೇಗುಲದ ಪ್ರಧಾನ ಅರ್ಚಕರಾದ ಶ್ರೀನಿವಾಸ್ ಭಟ್ ಹಾಗೂ ನರಸಿಂಹಪ್ರಿಯಭಟ್ ಮಾತನಾಡಿ, ‘ದೇವಾಲಯದ ನಿರ್ಮಾಣದ ಸಂದರ್ಭದಲ್ಲಿ ದೇವಾಲಯಕ್ಕೆ ಹಾಗೂ ಗೋಪುರಗಳಿಗೆ ಯಾವುದೇ ಸಿಡಿಲು ಹಾಗೂ ಪ್ರಕೃತಿ ವಿಕೋಪದಿಂದ ಹಾನಿ ಆಗದಂತೆ ನಿರ್ಮಾಣ ಮಾಡಿದ್ದಾರೆ. ಆದರೆ ಸಿಡಿಲಿನಿಂದ ಹಾನಿಯಾಗಿದೆ. ಯಾವ ಭಕ್ತಾದಿಗಳು ಆತಂಕ ಪಡುವ ಅಗತ್ಯತೆ ಇಲ್ಲ. ಆಗಮಿಕರ ಸಲಹೆ ಪಡೆದು ಅಂತರಂಗ ಶುದ್ಧಿ ಹಾಗೂ ಅಂಗೋದಕ ಶುದ್ಧಿ ಮಾಡಲಾಗುವುದು’ ಎಂದರು.