ಮಂಡ್ಯ :- ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಇದುವರೆಗೆ ಕೈಗೊಂಡಿರುವ ಕ್ರಮಗಳ ಕುರಿತು ಚುನಾವಣಾ ವೀಕ್ಷಕ ಅಮಿತ್ ಕುಮಾರ್ (ಐಎಎಸ್) ತೃಪ್ತಿ ವ್ಯಕ್ತಪಡಿಸಿದರು. ಮದ್ದೂರು ಪಟ್ಟಣದ ತಾಲೂಕು ಕಚೇರಿಯ ಚುನಾವಣಾಧಿಕಾರಿಗಳ ಕಛೇರಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಚುನಾವಣಾಧಿಕಾರಿ ಆರ್.ನಾಗರಾಜ್ ಅವರಿಂದ ಚುನಾವಣಾ ಸಿದ್ದತೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಬಳಿಕ ಪಟ್ಟಣದ ಮರಿಯಪ್ಪ ಕಾನ್ವೆಂಟ್ ಹಾಗೂ ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ಚುನಾವಣಾಧಿಕಾರಿ ಆರ್.ನಾಗರಾಜ್ ಹಾಗೂ ಅಧಿಕಾರಿಗಳ ಜೊತೆಗೂಡಿ ಮತಗಟ್ಟೆಗಳ ಪರಿಶೀಲನೆ ನಡೆಸಿದರು. ನಂತರ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಚುನಾವಣಾಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಚುನಾವಣೆ ಸುಸೂತ್ರವಾಗಿ ನಡೆಯುವ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗೆ ಆಗಮಿಸುವ ಸಲುವಾಗಿ ವಿಶೇಷ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಚುನಾವಣಾ ವೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದರು.
ಚುನಾವಣಾ ಆಯೋಗದ ಅನುಸಾರ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗುವಂತೆ ತಿಳಿಸಿದ ಅವರು, ರಿಟರ್ನಿಂಗ್ ಅಧಿಕಾರಿಗಳು ಇದುವರೆಗೆ ನಿರ್ವಹಿಸಿದ ಕೆಲಸಗಳ ವಿವರದ ಮಾಹಿತಿ ಪಡೆದುಕೊಂಡರು. ವಿಧಾನಸಭಾ ಕ್ಷೇತ್ರದ ಪ್ರತಿ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ಫ್ಯಾನ್, ರ್ಯಾಂಪ್, ವ್ಹೀಲ್ ಚೇರ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಬೇಕು. ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಅನುಕೂಲ ಕಲ್ಪಿಸಲು ಪ್ರತಿ ಮತಗಟ್ಟೆಗೆ ಒಬ್ಬೊಬ್ಬ ಸಿಬ್ಬಂದಿ ನಿಯೋಜಿಸಬೇಕೆಂದು ಸೂಚನೆ ನೀಡಿದರು.
ಇನ್ನು ಚುನಾವಣೆ ಸಂಬಂಧವಾಗಿ ಯಾವುದೇ ಚರ್ಚೆ ಮತ್ತು ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ದೂರವಾಣಿ ಸಂಖ್ಯೆ 9141010124 ಅಥವಾ ಮದ್ದೂರು ಪ್ರವಾಸಿ ಮಂದಿರದಲ್ಲಿ ಪ್ರತಿದಿನ ಬೆಳಿಗ್ಗೆ 10 ರಿಂದ 11 ಗಂಟೆವರೆಗೂ ಮುಕ್ತವಾಗಿ ಭೇಟಿ ನೀಡಿ ಅಹವಾಲು ಸಲ್ಲಿಸಬಹುದು ಎಂದು ಚುನಾವಣಾ ವೀಕ್ಷಕ ಅಮಿತ್ ಕುಮಾರ್ ತಿಳಿಸಿದರು.
ವರದಿ : ಗಿರೀಶ್ ರಾಜ್ ಮಂಡ್ಯ