ಸ್ಟಾರ್ ಕಲಾವಿದರು ತಮ್ಮ ಸಿನಿಮಾಗೆ ಬೇಕಾದ ಬದಲಾವಣೆಗಳನ್ನು ನಿರ್ದೇಶಕರು ಹಾಗೂ ನಿರ್ಮಾಪಕರ ಮೇಲೆ ಒತ್ತಡ ಹಾಕಿ ಮಾಡಿಸಿಕೊಳ್ಳುತ್ತಾರೆ. ಕೆವಲ ನಟರು ಮಾತ್ರವಲ್ಲ ನಟಿಯರು ಇದಕ್ಕೆ ಹೊರತಾಗಿಲ್ಲ. ಇದೀಗ ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಟ ನಯನತಾರಾ ವಿರುದ್ಧ ಮತ್ತೋರ್ವ ನಟಿ ಮಮತಾ ಮೋಹನ್ ದಾಸ್ ಗಂಭೀರ ಆರೋಪ ಮಾಡಿದ್ದಾರೆ.
ಸುದೀಪ್ ನಟನೆಯ ಗೂಳಿ ಸೇರಿದಂತೆ ತೆಲುಗು, ತಮಿಳು, ಮಲಯಾಳಂನ ಹಲವು ಸಿನಿಮಾಗಳಲ್ಲಿ ನಟಿಸಿರುವ ಮಮತಾ ಮೋಹನ್ದಾಸ್ ಅವರಿಗೆ 2008 ರಲ್ಲಿ ರಜನೀಕಾಂತ್ ನಟನೆಯ ಸಿನಿಮಾದ ಹಾಡೊಂದರಲ್ಲಿ ಡ್ಯಾನ್ಸ್ ಮಾಡುವ ಅವಕಾಶ ಲಭಿಸಿತಂತೆ. ಅಂತೆಯೇ ಮಮತಾ ಮೋಹನ್ದಾಸ್ ಒಪ್ಪಿಕೊಂಡು ಕೆಲವು ದಿನಗಳ ಶೂಟಿಂಗ್ ಸಹ ಮಾಡಿದ್ದಾರೆ. ಆದರೆ ಆ ಬಳಿಕ ಅವರಿಗೆ ಹೇಳದೆ ಕೇಳದೆ ಅವರ ದೃಶ್ಯಗಳನ್ನು ಹಾಡಿನಿಂದ ಕಿತ್ತುಹಾಕಲಾಯಿತು ಎಂದ ಸಂದರ್ಶನವೊಂದರಲ್ಲಿ ಮಮತಾ ಹೇಳಿಕೊಂಡಿದ್ದಾರೆ.
ರಜನೀಕಾಂತ್ ನಟನೆಯ ‘ಕುಸೇಲನ್’ ಸಿನಿಮಾದ ಹಾಡೊಂದರಲ್ಲಿ ನಾನು ಅವರೊಟ್ಟಿಗೆ ನಟಿಸಿದ್ದೆ. ಕೆಲವು ದಿನಗಳ ಶೂಟಿಂಗ್ ಸಹ ಮಾಡಲಾಗಿತ್ತು. ಆದರೆ ಆ ಸಿನಿಮಾದ ನಾಯಕಿ (ನಯನತಾರಾ) ಸಿನಿಮಾದ ನಿರ್ದೇಶಕರ ಮೇಲೆ ಒತ್ತಡ ಹೇರಿ ನನ್ನನ್ನು ಹಾಡಿನಿಂದ ದೂರ ಇಡುವಂತೆ ಮಾಡಿದ್ದರು. ಸಿನಿಮಾ ರಿಲೀಸ್ ಬಳಿಕ ಇದು ನನಗೆ ಗೊತ್ತಾಗಿ ತುಂಬಾ ಅಚ್ಚರಿಯಾಯ್ತು ಎಂದು ನಟಿ ಮಮತಾ ಹೇಳಿದ್ದಾರೆ.
ಬೇರೆ ಯಾರನ್ನೋ ಕರೆಸಿ ರಜನೀಕಾಂತ್ ಅವರೊಟ್ಟಿಗೆ ಡ್ಯಾನ್ಸ್ ಮಾಡಿಸುವುದಾದರೆ ನಾನು ಏಕೆ ಬೇಕು? ನಾನು ಚಿತ್ರೀಕರಣಕ್ಕೆ ಬರುವುದಿಲ್ಲ ಎಂದು ನಾಯಕಿ (ನಯನತಾರಾ) ಆ ಸಿನಿಮಾದ ನಿರ್ದೇಶಕರಿಗೆ ಹೇಳಿದ್ದರಂತೆ, ಈ ವಿಚಾರ ಸಿನಿಮಾ ರಿಲೀಸ್ ಬಳಿಕ ನನಗೆ ಗೊತ್ತಾಯಿತು. ಆಗ ಅದು ನನಗೆ ಬೆದರಿಕೆ ಎನಿಸಿತು. ನಾನು ಅದನ್ನು ಸಮಾಧಾನದಿಂದಲೇ ಸ್ವೀಕರಿಸಿದೆ ಎಂದು ಮಮತಾ ಹೇಳಿದ್ದಾರೆ. ತಲೈವಾ ಅವರ ‘ಕುಸೇಲನ್’ ಸಿನಿಮಾದ ಹಾಡೊಂದರಲ್ಲಿ ಮಮತಾ ಮೋಹನ್ ದಾಸ್ ಕೆಲವೇ ಸೆಕೆಂಡ್ ಅಷ್ಟೆ ಕಾಣಿಸುತ್ತಾರೆ. ಅಲ್ಲಿಯೂ ಅವರ ಮುಖ ಸರಿಯಾಗಿ ಕಾಣುವುದಿಲ್ಲ. ಸಂದರ್ಶನದಲ್ಲಿ ನಯನತಾರಾ ಹೆಸರು ಹೇಳದೇ ಈ ಘಟನೆ ಬಗ್ಗೆ ನಟಿ ಮಮತಾ ಮಾತನಾಡಿದ್ದಾರೆ.