ಬೆಂಗಳೂರು: ರಾಜ್ಯದ 16ನೇ ವಿಧಾನಸಭೆಗೆ ಪ್ರವೇಶಿಸುವ ಉತ್ಸಾಹದಿಂದ ಸಾರ್ವತ್ರಿಕ ಚುನಾವಣೆಗೆ ಒಟ್ಟು 3,633 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಮೇ 10 ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ನಿಗದಿತ ಗಡುವು ಗುರುವಾರ ಮುಗಿದಿದ್ದು, ಇನ್ನು 20 ದಿನಗಳ ಕಾಲ ಪ್ರಚಾರದ ಭರಾಟೆಗೆ ಅಖಾಡ ಪೂರ್ಣ ಪ್ರಮಾಣದಲ್ಲಿ ಅಣಿಯಾಗಿದೆ.
3,328 ಪುರುಷರು ಹಾಗೂ 304 ಮಹಿಳೆಯರು ಸೇರಿ ಒಟ್ಟು 3,633 ಅಭ್ಯರ್ಥಿಗಳಿಂದ 5,102 ನಾಮಪತ್ರಗಳು ಸ್ವೀಕೃತಗೊಂಡಿವೆ. ಬಿಜೆಪಿ ಪಕ್ಷದಿಂದ 706 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಕಾಂಗ್ರೆಸ್ನಿಂದ 651 ಮತ್ತು ಜೆಡಿಎಸ್ನಿಂದ ಒಟ್ಟು 455 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಎಎಪಿಯಿಂದ 373, ಬಿಎಸ್ಪಿಯಿಂದ 179, ಸಿಪಿಎಂನಿಂದ ಐವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನೋಂದಾಯಿತ ಮಾನ್ಯತೆ ಇಲ್ಲದ ಪಕ್ಷಗಳಿಂದ 1,008 ಹಾಗೂ ಪಕ್ಷೇತರರಿಂದ ಒಟ್ಟು 1,720 ನಾಮಪತ್ರ ಸಲ್ಲಿಕೆಯಾಗಿವೆ.
ಶುಕ್ರವಾರ ನಾಮಪತ್ರಗಳ ಕ್ರಮಬದ್ಧತೆಯ ಪರಿಶೀಲನೆ ನಡೆಯಲಿದ್ದು, ಏ.24 ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮುಂದಿನ ವಾರದ ಆರಂಭದಿಂದಲೇ ರಾಷ್ಟ್ರೀಯ ನಾಯಕರು ಒಳಗೊಂಡು ನಾನಾ ಪಕ್ಷಗಳ ಸ್ಟಾರ್ ಪ್ರಚಾರಕರು ಪ್ರಚಾರದ ಕಣಕ್ಕೆ ಎಂಟ್ರಿ ಕೊಡಲಿದ್ದು, ರಾಜ್ಯಾದ್ಯಂತ ಬೇಸಿಗೆ ಉರಿಬಿಸಿಲಿಗೆ ಪೈಪೋಟಿ ನೀಡುವಂತೆ ಪ್ರಚಾರದ ಅಬ್ಬರ ಜೋರಾಗಲಿದೆ.
ಘಟಾನುಘಟಿಗಳು ಅಖಾಡಕ್ಕೆ!
ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಎಚ್ಡಿ ಕುಮಾರಸ್ವಾಮಿ, ಜಗದೀಶ ಶೆಟ್ಟರ್ ಸೇರಿ ಹಲವು ಘಟಾನುಘಟಿ ನಾಯಕರು ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, 92ರ ಹರೆಯದ ಶಾಮನೂರು ಶಿವಶಂಕರಪ್ಪ ಅವರು ಉಮೇದುವಾರಿಕೆ ಸಲ್ಲಿಸಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಿರುವುದು ಈ ಸಲದ ವಿಶೇಷವಾಗಿದೆ. ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗಿ ಬಿವೈ ವಿಜಯೇಂದ್ರ ಶಿಕಾರಿಪುರದಲ್ಲಿ ಚೊಚ್ಚಲ ರಾಜಕೀಯ ಭವಿಷ್ಯದ ಅಗ್ನಿಪರೀಕ್ಷೆ ಎದುರಿಸುತ್ತಿದ್ದಾರೆ.
ಬಿಜೆಪಿ ಎಲ್ಲ224 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ ಮೇಲುಕೋಟೆಯಲ್ಲಿಸರ್ವೋದಯ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸಿ, ಉಳಿದ 223 ಕ್ಷೇತ್ರಗಳಿಗೆ ಉಮೇದುವಾರರನ್ನು ಕಣಕ್ಕಿಳಿಸಿದೆ. ಜೆಡಿಎಸ್ ಕೂಡ 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿಅಭ್ಯರ್ಥಿಗಳಿಗೆ ಬಿ -ಫಾರಂ ನೀಡಿದ್ದು, ನಂಜನಗೂಡು ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ ಅವರಿಗೆ ಬೆಂಬಲ ಘೋಷಿಸಿದ್ದು, ಇತರ 7 ಕ್ಷೇತ್ರಗಳಲ್ಲಿಅನ್ಯಪಕ್ಷಗಳ ಅಭ್ಯರ್ಥಿಗಳನ್ನು ಬೆಂಬಲಿಸಿದೆ.
ಮಾಜಿ ಡಿಸಿಎಂ ಹಾಗೂ ಕಂದಾಯ ಸಚಿವ ಆರ್ ಅಶೋಕ್ ಅವರು ಪದ್ಮನಾಭನಗರದ ಜತೆಗೆ, ಕನಕಪುರ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಕಣಕ್ಕಿಳಿದು ಡಬಲ್ ಸವಾಲನ್ನು ಎದುರುಗೊಂಡಿದ್ದಾರೆ. ವಸತಿ ಸಚಿವ ವಿ ಸೋಮಣ್ಣ ಕೂಡ ವರುಣಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಖಾಡಕ್ಕಿಳಿದಿದ್ದು, ಚಾಮರಾಜನಗರದಲ್ಲೂ ಚುನಾವಣಾ ಅಗ್ನಿಪರೀಕ್ಷೆ ಎದುರಿಸುತ್ತಿದ್ದಾರೆ. ಬಿಜೆಪಿ ತಂತ್ರಕ್ಕೆ ಸೆಡ್ಡುಹೊಡೆಯುವ ಪ್ರತಿತಂತ್ರವಾಗಿ ಕನಕಪುರ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಸೋದರರು ನಾಮಪತ್ರ ಸಲ್ಲಿಸುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಅಮವಾಸ್ಯೆ ನಗಣ್ಯ!
ಶುಭ ಕೆಲಸಗಳಿಗೆ ಅಮವಾಸ್ಯೆ ಹಾಗೂ ಗ್ರಹಣ ಸೂಕ್ತವೋ, ಅಲ್ಲವೋ ಎಂಬ ಸಂದಿಗ್ದತೆ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರಗಳು ಸಲ್ಲಿಕೆಯಾದವು. ಕೆಲವು ಕ್ಷೇತ್ರಗಳಿಗೆ ಬುಧವಾರ ತಡರಾತ್ರಿ ಅಭ್ಯರ್ಥಿಗಳ ಘೋಷಣೆಯಾದ ಹಿನ್ನೆಲೆಯಲ್ಲಿ ಅಮವಾಸ್ಯೆ ದಿನವೂ ನಾಮಪತ್ರ ಸಲ್ಲಿಸುವುದು ಕೆಲವರಿಗೆ ಅನಿವಾರ್ಯವಾಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ತಮ್ಮ ನಾಮಪತ್ರ ಸಲ್ಲಿಕೆಗೆ ರಾಹುಕಾಲವನ್ನೇ ಆಯ್ಕೆ ಮಾಡಿಕೊಂಡು ಗಮನ ಸೆಳೆದರು.