ಬೆಂಗಳೂರು: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಚಿವ ಜಮೀರ್ ಅಹ್ಮದ್ ಅವರ ನಾಮಪತ್ರವನ್ನು ತಿರಸ್ಕರಿಸಬೇಕೆಂದು ನವಭಾರತ ಸೇನಾ ಪಾರ್ಟಿ, ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ನಾಮಪತ್ರದಲ್ಲಿ ಜಮೀರ್ ಅಹ್ಮದ್ ಕೆಲವು ಲೋಪಗಳನ್ನು ಮಾಡಿದ್ದಾರೆ. ನಿಯಮಗಳ ಪ್ರಕಾರ, ಯಾವುದೇ ಅಭ್ಯರ್ಥಿಯು ತನಗೆ ಸಂಬಂಧಿಸಿದ ಮಾಹಿತಿಗಳನ್ನು ಮರೆಮಾಚಬಾರದು ಅಥವಾ ಅರ್ದಂಬರ್ಧ ನೀಡಬಾರದು. ಆದರೆ, ಜಮೀರ್ ಅವರು ಇಂಥ ತಪ್ಪುಗಳನ್ನು ತಮ್ಮ ನಾಮಪತ್ರದಲ್ಲಿ ಮಾಡಿದ್ದಾರೆ. ಜೊತೆಗೆ, ಒಂದು ಕಾಲಂ ಖಾಲಿ ಬಿಟ್ಟಿದ್ದಾರೆ. ಇದು ಕೂಡ ತಪ್ಪು. ಆದ್ದರಿಂದ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ನವಭಾರತ ಸೇನಾ ಪಾರ್ಟಿ ಆಗ್ರಹಿಸಿದೆ.
ಮಾಹಿತಿ ಮಾಚಿದ್ದಾರೆಯೇ ಜಮೀರ್?
ಜಮೀರ್ ನಾಮಪತ್ರ ತಿರಸ್ಕರಿಸಬೇಕು ಎಂದು ನವಭಾರತ ಸೇನಾ ಪಾರ್ಟಿಯ ಪರವಾಗಿ ರುಕ್ಮಾಂಗದ ಅವರು ಹೇಳಿಕೆ ನೀಡಿದ್ದಾರೆ. ಅವರ ಪ್ರಕಾರ, ಜಮೀರ್ ಅವರು ಲೋಕಾಯುಕ್ತಕ್ಕೆ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ತಮ್ಮನ್ನು ಆಧರಿಸಿರುವ ತಮ್ಮ ಕುಟುಂಬ ಸದಸ್ಯರ ಪಟ್ಟಿಯಲ್ಲಿ ತಮ್ಮ ತಾಯಿಯ ಹೆಸರನ್ನು ಸೇರಿಸಿದ್ದರು. ಆದರೆ, ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ನಾಮಪತ್ರದಲ್ಲಿ ತಾಯಿಯ ಹೆಸರನ್ನು ಸೇರಿಸಿಲ್ಲ. ಇದು ಮೊದಲನೇ ಲೋಪವಾಗಿದೆ ಎಂದಿದ್ದಾರೆ.
ಸುಪ್ರೀಂ ಕೋರ್ಟ್ ಕೂಡ, ಅಭ್ಯರ್ಥಿಗಳು ನಾಮಪತ್ರದಲ್ಲಿ ಯಾವುದೇ ಮಾಹಿತಿಗಳನ್ನು ಮರೆಮಾಚಬಾರದು ಅಥವಾ ಯಾವುದೇ ಮಾಹಿತಿಯನ್ನು ಅರ್ದಂಬರ್ಧ ಮಾಡಬಾರದು ಎಂದು ಹೇಳಿದೆ. ಈಗ, ಜಮೀರ್ ಅವರು ತಮ್ಮ ತಾಯಿಯ ಹೆಸರನ್ನು ಮರೆಮಾಚಿರುವುದು ಸುಪ್ರೀಂ ಕೋರ್ಟ್ ನೀಡಿದ್ದ ಸೂಚನೆಯನ್ನು ಉಲ್ಲಂಘಿಸಿದಂತಾಗಿದೆ ಎಂದು ರುಕ್ಮಾಂಗದ ಹೇಳಿದ್ದಾರೆ