ದಾವಣಗೆರೆ: ಬಿಜೆಪಿ (BJP) ಟಿಕೆಟ್ ವಂಚಿತ ವಾಗೀಶ್ ಪಕ್ಷೇತರವಾಗಿ ಸ್ಪರ್ಧಿಸಲು ಸುಳ್ಳು ಜಾತಿ ಪ್ರಮಾಣ (Fake caste certificate) ಪತ್ರ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮಾಯಕೊಂಡ (Mayakonda) ಎಸ್ಸಿ (SC) ಮೀಸಲು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಹರಿಹರ (Harihara) ಮೂಲದ ವಾಗೀಶ್ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಅವರ ಬಳಿ ಲಿಂಗಾಯತ ಸಮುದಾಯದ ಜಾತಿ ಪ್ರಮಾಣ ಪತ್ರವಿದ್ದರೂ, ಅಭ್ಯರ್ಥಿ ಬೇಡ ಜಂಗಮ ಸಮುದಾಯದ ಎಸ್ಸಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂಬ ಆರೋಪ ಬಂದಿದೆ.
ಶಾಲಾ ದಿನಗಳಿಂದ ಲಿಂಗಾಯತ (Lingayat) ಜಾತಿ ಪ್ರಮಾಣ ಪತ್ರ ಹೊಂದಿದ್ದ ಇವರು ಬೆಂಗಳೂರಿನಲ್ಲಿ 2020ರಲ್ಲಿ ಎಸ್ಸಿ ಪ್ರಮಾಣ ಪತ್ರ ಪಡೆದಿದ್ದಾರೆ. ಇದೀಗ ಬೆಂಗಳೂರು ನಗರ ಜಿಲ್ಲೆಯ ಡಿಸಿ ಕೆ.ಎ.ದಯಾನಂದ್ (K.A Dayananda) ಎಸ್ಸಿ ಪ್ರಮಾಣ ಪತ್ರವನ್ನು ರದ್ದು ಪಡಿಸಿ ಆದೇಶ ಹೊರಡಿಸಿದ್ದಾರೆ. ಈಗ ವಾಗೀಶ್ ಏ.24ರ ಒಳಗಾಗಿ ನ್ಯಾಯಾಲಯದ ಮೊರೆ ಹೋಗಿ ಜಿಲ್ಲಾಧಿಕಾರಿಗಳ ಆದೇಶ ರದ್ದು ಪಡಿಸುವ ಅನಿವಾರ್ಯತೆ ಇದೆ.
ವಾಗೀಶ್ ಬಳಿ ಸುಳ್ಳು ಜಾತಿ ಪ್ರಮಾಣ ಪತ್ರ ಇದೆ ಎಂಬ ಕಾರಣಕ್ಕೆ ಬಿಜೆಪಿ ಟಿಕೆಟ್ ನೀಡಿರಲಿಲ್ಲ ಎಂಬ ಮಾತು ಕೇಳಿ ಬಂದಿದೆ. ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಪಕ್ಷೇತರವಾಗಿ ಸ್ಪರ್ಧೆ ನಡೆಸಲು ವಾಗೀಶ್ ಮುಂದಾಗಿದ್ದರು.