ಮಂಡ್ಯ :- ಜೆಡಿಎಸ್ ಯುವ ಘಟಕದ ಮಾಜಿ ಅಧ್ಯಕ್ಷ, ಉದ್ಯಮಿ ಸಿ.ಟಿ.ಶಂಕರ್ ಕಾಂಗ್ರೆಸ್ ಸೇರ್ಪಡೆಯಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದ್ದು, ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತ ಎಂದು ಅಭ್ಯರ್ಥಿ ಕೆ.ಎಂ.ಉದಯ್ ಹರ್ಷ ವ್ಯಕ್ತಪಡಿಸಿದರು. ಮದ್ದೂರು ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಗುರುವಾರ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಉದ್ಯಮಿ ಸಿ.ಟಿ.ಶಂಕರ್ ಅವರನ್ನು ಪಕ್ಷದ ಶಾಲು ಹೊದಿಸಿ ಅಭಿನಂದಿಸಿ ಮಾತನಾಡಿದರು.
ಯುವ ಘಟಕದ ಅಧ್ಯಕ್ಷರಾಗಿದ್ದ ಶಂಕರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯುವಕರನ್ನು ಅಧಿಕ ಸಂಖ್ಯೆಯಲ್ಲಿ ಸಂಘಟಿಸುವ ಮೂಲಕ ಶಾಸಕ ಡಿ.ಸಿ.ತಮ್ಮಣ್ಣರ ಅಭೂತಪೂರ್ವ ಗೆಲುವಿಗೆ ಸಾಕ್ಷಿಯಾಗಿದ್ದರು. ಆನಂತರ ಇವರಿಂದ ಪ್ರಯೋಜನ ಪಡೆದ ಶಾಸಕ ಡಿ.ಸಿ.ತಮ್ಮಣ್ಣ ಸೇರಿದಂತೆ ಪಕ್ಷದ ವರಿಷ್ಠರುಗಳು ಸಂಪೂರ್ಣವಾಗಿ ಕಡೆಗಣಿಸಿದ್ದರು. ಆನಂತರ ಚುನಾವಣಾ ಚಟುವಟಿಕೆಗಳಿಂದ ತಟಸ್ಥರಾಗಿದ್ದ ಶಂಕರ್ ನಾನು ಮದ್ದೂರು ಕ್ಷೇತ್ರದಲ್ಲಿ ಕೈಗೊಂಡಿದ್ದ ಸಮಾಜ ಮುಖಿ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತಿದ್ದರು.
ಈಗ ನಾನು ಮದ್ದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಬಳಿಕ ಪಕ್ಷಕ್ಕೆ ಸೇರ್ಪಡೆಗೊಂಡು ನನ್ನ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದಾರೆ. ಹೀಗಾಗಿ ನನಗೆ ಗೆಲುವಿನ ಹುಮ್ಮಸ್ಸು ಮತ್ತಷ್ಟು ಇಮ್ಮಡಿಗೊಂಡಿದೆ ಎಂದು ಉದಯ್ ವಿಶ್ವಾಸ ವ್ಯಕ್ತಪಡಿಸಿದರು.ಕಾಂಗ್ರೆಸ್ ಸೇರ್ಪಡೆಗೊಂಡ ನಂತರ ಮಾತನಾಡಿದ ಉದ್ಯಮಿ ಸಿ.ಟಿ.ಶಂಕರ್ ಕಳೆದ ಚುನಾವಣೆಯಲ್ಲಿ ಶಾಸಕ ತಮ್ಮಣ್ಣ ಗೆಲುವಿಗೆ ಸಾಕಷ್ಟು ಶ್ರಮಿಸಿದ್ದೆ ಅವರು ಗೆದ್ದು ಸಾರಿಗೆ ಸಚಿವರಾದ ನಂತರವೂ ನನ್ನ ಬೆಂಬಲಿಗರ ಸಣ್ಣ, ಪುಟ್ಟ ಸಮಸ್ಯೆಗಳಿಗೂ ಸ್ಪಂದಿಸದೆ ಕಡೆಗಣಿಸಿದರು ಈ ಬಗ್ಗೆ ಪಕ್ಷದ ವರಿಷ್ಠರಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗಮನಕ್ಕೂ ತಂದಿದ್ದೆ ಅವರು ಸಹ ನನ್ನನ್ನು ಪರಿಗಣಿಸಲಿಲ್ಲ ಇದರಿಂದ ಬೇಸತ್ತ ನಾನು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದೆ ಎಂದರು.
ಈಗ ಕೆ.ಎಂ.ಉದಯ್ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವುದರಿಂದ ಕ್ಷೇತ್ರದಲ್ಲಿ ಅವರ ಗೆಲುವಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದು ಆಶ್ವಾಸನೆ ನೀಡಿದರು. ಇದೇ ವೇಳೆ ಕೆಪಿಸಿಸಿ ಸದಸ್ಯ ಕದಲೂರು ರಾಮಕೃಷ್ಣ, ತಾ.ಪಂ ಮಾಜಿ ಸದಸ್ಯ ತೈಲೂರು ಚಲುವರಾಜ್, ಗೆಜ್ಜಲಗೆರೆ ಗ್ರಾ.ಪಂ ಅಧ್ಯಕ್ಷ ಹರೀಶ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ