ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೇವನಹಳ್ಳಿ (Devanahalli) ತಾಲೂಕಿನ ವಿಜಯಪುರದಲ್ಲಿ ನಡೆಯಬೇಕಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಶೋ (roadshow) ಮಳೆಯಿಂದಾಗಿ ರದ್ದು ಪಡಿಸಲಾಗಿದೆ. ಅಮಿತ್ ಶಾ ಅವರು ಶುಕ್ರವಾರ ಬೆಂಗಳೂರಿಗೆ ಭೇಟಿ ನೀಡಿದ್ದು, ಈ ವೇಳೆ ತಾಲ್ಲೂಕಿನಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಬೇಕಿತ್ತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಶಾ, ಸ್ಥಳಕ್ಕೆ ತೆರಳುವ ಮೊದಲು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದರು. ಆದರೆ ಮಳೆಯಿಂದಾಗಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿಯು ರೋಡ್ ಶೋ ರದ್ದುಗೊಳಿಸಲು ನಿರ್ಧರಿಸಿದೆ. ವಿಜಯಪುರ ಬದಲಿಗೆ ಬೆಂಗಳೂರಿನತ್ತ ಅಮಿತ್ ಶಾ ತೆರಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಮಿತ್ ಶಾ ಬರುತ್ತಾರೆ ಎಂದು ಕಾದಿದ್ದ ಕಾರ್ಯಕರ್ತರಿಗೆ ನಿರಾಸ್ ಉಂಟಾಗಿದೆ.
ರೋಡ್ ಶೋಗಾಗಿ ಕೇಸರಿಮಯವಾದ ವಿಜಯಪುರ ಪಟ್ಟಣ
ಅಮಿತ್ ಶಾ ಅವರ ಭೇಟಿಗೆ ಮುಂಚಿತವಾಗಿ ದೇವನಹಳ್ಳಿ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಕೇಸರಿ ಬಣ್ಣದಿಂದ ಕಂಗೊಳಿಸುತ್ತಿತ್ತು. ರಸ್ತೆಯ ಇಕ್ಕೆಲುಗಳಲ್ಲಿ ಬ್ಯಾರಿಕೇಡ್ ಹಾಕಿ ಕೇಸರಿ ಬಾವುಟಗಳ ಕಟ್ಟಲಾಗಿತ್ತು. ರೋಡ್ ಶೋ ನಡೆಯುವ ರಸ್ತೆಯಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿಸಲಾಗಿತ್ತು. ಅಂಗಡಿ ಮುಗಟ್ಟುಗಳ ಮುಂದೆ ಸಾವಿರಾರು ಜನ ನಿಲ್ಲಲು ವ್ಯವಸ್ಥೆ ಸಹ ಮಾಡಲಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ವಿರುದ್ಧ ಬಿಜೆಪಿಯಿಂದ ಪಿಳ್ಳ ಮುನಿಶಾಮಪ್ಪರನ್ನು ಕಣಕ್ಕಿಳಿಸಲಾಗಿದೆ.
ಬಿಜೆಪಿ ತನ್ನ ಎಲ್ಲಾ 224 ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದ ನಂತರ ಅಮಿತ್ ಶಾ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದರು. ಅಮಿತ್ ಶಾ ನೇರವಾಗಿ ಬೆಂಗಳೂರಿನ ಖಾಸಗಿ ಹೋಟೆಲ್ಗೆ ಪ್ರಯಾಣಿಸಲಿದ್ದು, ಅಲ್ಲಿ ಪಕ್ಷದ ರಾಜ್ಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರು ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಅಮಿತ್ ಶಾ ಚರ್ಚಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.