ಬೆಂಗಳೂರು: ವಿಧಾನಸಭಾ ಚುನಾವಣೆ (Assembly Election) ಹಿನ್ನೆಲೆ ಬಿಜೆಪಿ (BJP) ಪ್ರಚಾರ ಕಾರ್ಯಗಳನ್ನು ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ರಾಜ್ಯಕ್ಕೆ ಆಗಮಿಸಿದ್ದಾರೆ. ಆದರೆ ಶುಕ್ರವಾರ ನಿಗದಿಪಡಿಸಲಾಗಿದ್ದ ಶಾ ಅವರ ರೋಡ್ ಶೋವನ್ನು (Road Show) ಮಳೆಯ ಹಿನ್ನೆಲೆ ರದ್ದುಗೊಳಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ, ಮಳೆ ಬರುತ್ತಿರುವ ಹಿನ್ನೆಲೆ ರೋಡ್ ಶೋ ಮುಂದೂಡಿಕೆ ಮಾಡಿದ್ದೇವೆ. ಮಳೆ ಇರುವ ಕಾರಣ ತಮಗೆ ತೊಂದರೆ ಆಗಬಹುದು. ಮುಂದಿನ ದಿನಗಳಲ್ಲಿ ದಿನಾಂಕ ನಿಗದಿ ಮಾಡಿ ರೋಡ್ ಶೋ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಅಮಿತ್ ಶಾ ಅವರು ಈಗಾಗಲೇ ಬೆಂಗಳೂರಿಗೆ (Bengaluru) ಬಂದಿದ್ದಾರೆ. ಮಳೆ ಹೆಚ್ಚಾದ ಕಾರಣದಿಂದ ಹೈಕಮಾಂಡ್ ನಾಯಕರು ಈ ರೋಡ್ ಶೋ ಕ್ಯಾನ್ಸಲ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಕಾರ್ಯಕ್ರಮ ಮಾಡುತ್ತೇವೆ. ಮತ್ತೆ ನಾವು ಇದೇ ಜಾಗದಲ್ಲಿ ಸೇರೋಣ. ವರುಣ ದೇವರು ನಮಗೆ ಆಶೀರ್ವಾದ ಮಾಡಿದ್ದಾರೆ. ಪುನಃ ಕಾರ್ಯಕ್ರಮ ಆಯೋಜಿಸಿ ಘೋಷಣೆ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಅಮಿತ್ ಶಾ ರೋಡ್ ಶೋ ರದ್ದಾಗುತ್ತಿದ್ದಂತೆಯೇ ಅವರಿಗಾಗಿ ತರಿಸಲಾಗಿದ್ದ 250 ಕೆಜಿ ತೂಕದ ಸೇಬಿನ ಹಾರವನ್ನು (Apple Garland) ಜನರು ಚಿಂದಿ ಚಿಂದಿ ಮಾಡಿದ್ದಾರೆ. ಹಾರಕ್ಕೆ ಕೈ ಹಾಕಿ ಸೇಬುಗಳನ್ನು ಜನರು ಕಿತ್ತುಕೊಂಡು ಹೋಗಿದ್ದು, ಕ್ಷಣಾರ್ಧದಲ್ಲೇ ಹಾರದಲ್ಲಿದ್ದ ಸೇಬುಗಳೆಲ್ಲವೂ ಖಾಲಿಯಾಗಿ ಹೋಗಿದೆ.