ಖಾರ್ಟೂಮ್: ಮುಸ್ಲಿಂಮರ ಪವಿತ್ರ ಈದ್ ಹಬ್ಬದ ಹಿನ್ನೆಲೆಯಲ್ಲಿ 74 ಗಂಟೆಗಳ ಕಾಲ ಯುದ್ಧ ವಿರಾಮ ಘೋಷಿಸಿದ್ದ ಸುಡಾನ್ ಇದೀಗ ಒಪ್ಪಂದವನ್ನು ಮೀರಿ ರಾಜಧಾನಿ ಖಾರ್ಟೂಮ್ನಲ್ಲಿ ಭಾರಿ ಗುಂಡಿನ ಚಕಮಕಿ ಮತ್ತು ಸ್ಫೋಟಗಳು ನಡೆಸಿದೆ.
ಸುಡಾನ್ ಸೇನಾ ಮುಖ್ಯಸ್ಥ ಅಬ್ದುಲ್ ಫತಾಹ್ ಬೆಂಬಲಿತ ಸೇನಾ ಪಡೆ ಮತ್ತು ಉಪ ಸೇನಾ ಮುಖ್ಯಸ್ಥ ಮೊಹಮ್ಮದ್ ಹಮ್ದಾನ್ ಡಾಗ್ಲೊ ನೇತೃತ್ವದ ಪ್ಯಾರಾ ಮಿಲಿಟರಿ ಪಡೆಗಳ ನಡುವೆ ಕಳೆದ ಶನಿವಾರ ಸಂಘರ್ಷ ಆರಂಭವಾದಾಗಿನಿಂದ ನಡೆದ ಗುಂಡಿನ ಚಕಮಕಿಯಲ್ಲಿ ಈವರಗೆ ಕನಿಷ್ಠ 300 ಜನರು ಮೃತಪಟ್ಟು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ.
ಈದ್ ಉಲ್ ಫಿತ್ರ್ ಆಚರಣೆಯ ರಾತ್ರಿಯೂ ಖಾರ್ಟೂಮ್ನ ಹಲವು ಪ್ರದೇಶಗಳಲ್ಲಿ ಬಾಂಬ್ ಸ್ಫೋಟಿಸಲಾಗಿದೆ. ಶೆಲ್ ದಾಳಿ ಮತ್ತು ಸಂಘರ್ಷಗಳು ಸತತ ಆರನೇ ದಿನವೂ ಮುಂದುವರಿದಿದ್ದವು ಎಂದು ಸುಡಾನ್ ವೈದ್ಯರ ಕೇಂದ್ರ ಸಮಿತಿ ಹೇಳಿದೆ.
ಅಧಿಕ ಜನಸಂದಣಿ ಇರುವ ಖಾರ್ಟೂಮ್ ಜಿಲ್ಲೆ, ವೈಮಾನಿಕ ದಾಳಿಗಳು ಮತ್ತು ಟ್ಯಾಂಕ್ಗಳನ್ನು ಬಳಸಿ ಗುಂಡಿನ ದಾಳಿ ಸೇರಿದಂತೆ ಭಯಾನಕ ಸಂಘರ್ಷಕ್ಕೆ ಸಾಕ್ಷಿಯಾಗಿದೆ. 50 ಲಕ್ಷ ಜನ ವಾಸವಿರುವ ನಗರದಲ್ಲಿ ಬಹುತೇಕರು, ವಿದ್ಯುತ್, ಆಹಾರ ಅಥವಾ ನೀರು ಇಲ್ಲದೆ ತಡೆಯಲಾಗದ ಶಾಖದಲ್ಲಿ ಮನೆಯಲ್ಲಿಯೇ ಅವಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.