ಜರ್ಮನ್ ಹುಡುಗಿಯೊಬ್ಬಳು ಕನ್ನಡ ಸೇರಿದಂತೆ ಭಾರತೀಯ ಭಾಷೆಗಳ ಹಾಡುಗಳನ್ನು ಹಾಡುತ್ತಾ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದು ಇದರಿಂದಲೇ ಸಾಕಷ್ಟು ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದಾಳೆ. ಹೇಳಿ ಕೇಳಿ ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ಬಹುಸಂಸ್ಕೃತಿಯ ವಿಶಾಲ ದೇಶ. ಹಾಗೆ ಈ ಹುಡುಗಿಯೂ ಕೂಡ ಇಲ್ಲಿನ ಬಹುಸಂಸ್ಕೃತಿಯ ವಿವಿಧ ಭಾಷೆಗಳ ಹಾಡುಗಳನ್ನು ತನ್ನ ಸುಮಧುರ ಕಂಠದಿಂದ ಹಾಡುತ್ತಿದ್ದು, ಇನ್ಸ್ಟಾಗ್ರಾಮ್ನಲ್ಲಿ ಹಲ್ಛಲ್ ಸೃಷ್ಟಿಸಿದ್ದಾಳೆ.
ಸಿನಿಮಾ ಹಾಡುಗಳಿಂದ ಹಿಡಿದು ಹಿಂದೂ ಸನಾತನ ಧರ್ಮದ ಆಧ್ಯಾತ್ಮದ ಭಕ್ತಿಗೀತೆ ಸ್ತೋತ್ರಗಳನ್ನು ಕೂಡ ಈಕೆ ಹಾಡಿದ್ದು, ಮೃತ್ಯಂಜಯ ಮಂತ್ರ ನನ್ನ ಬದುಕು ಬದಲಿಸಿದೆ ಎಂದು ಹೇಳುತ್ತಾಳೆ ಈ ಬೆಡಗಿ. ಅಂದಹಾಗೆ ಈಕೆಯ ಹೆಸರು CassMae, ಇನ್ಸ್ಟಾಗ್ರಾಮ್ನಲ್ಲಿ CassMae ಹೆಸರಿನಿಂದ ಗುರುತಿಸಿಕೊಂಡಿರುವ ಈಕೆ ಜರ್ಮನ್ನ ಓರ್ವ ಗಾಯಕಿ ಹಾಗೂ ಇನ್ಫ್ಲುಯೆನ್ಸರ್, ಜರ್ಮನ್ ಗಾಯಕಿ ಹಾಗೂ ಹಾಡುಗಳ ಬರಹಗಾರ್ತಿ ಎಂದು ತನ್ನ ಬಯೋದಲ್ಲಿ ಬರೆದುಕೊಂಡಿರುವ ಈಕೆ ಭಾರತದ ಮೇಲೆ ನನಗೆ ಇನ್ನಿಲ್ಲದ ಪ್ರೀತಿ ಇದೆ ಎಂದು ಹೇಳಿಕೊಂಡಿದ್ದಾಳೆ.
ಇತ್ತೀಚೆಗೆ ಈಕೆ ಪುರಂದರದಾಸರ ಭಾಗ್ಯದ ಲಕ್ಷ್ಮಿ ಬಾರಮ್ಮ ಎಂಬ ಭಕ್ತಿಗೀತೆಯನ್ನು ಸುಶ್ರಾವ್ಯವಾಗಿ ಹಾಡಿದ್ದು, ಈಕೆಯ ಕಂಠಸಿರಿ ಕೇಳಿದರೆ ಲಕ್ಷ್ಮಿಯೇ ಎದ್ದು ಹೊರಟು ಬಿಡುವಳೇನೋ ಅನ್ನುವಷ್ಟು ಸುಶ್ರಾವ್ಯವಾಗಿ ಮೂಡಿ ಬಂದಿದೆ ಈ ಹಾಡು. ಅನೇಕರು ಈಕೆಯ ಹಾಡು ಕೇಳಿ ಬೆರಗಾಗಿದ್ದು, ಲಕ್ಷಿ ಬಂದೆ ಬಿಡುವಳು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಅನೇಕರು ಕನ್ನಡದಲ್ಲಿ ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಅನೇಕರಿಗೆ ಈ ಹಾಡಿನ ಬಗ್ಗೆ ಗೊತ್ತಿಲ್ಲ. ಹೀಗಿರುವಾಗ ಕನ್ನಡದ ಗಂಧಗಾಳಿ ಇಲ್ಲದ ನೀವು ಹಾಡಿರುವುದು ಗ್ರೇಟ್ ಎಂದು ಆಕೆಯನ್ನು ಕೊಂಡಾಡಿದ್ದಾರೆ. ಮತ್ತೆ ಕೆಲವರು ಇನ್ನು ಕೆಲವು ಕನ್ನಡದ ಭಕ್ತಿಗೀತೆಗಳನ್ನು ಆಕೆಗೆ ತಿಳಿಸಿ ಇದನ್ನು ಒಮ್ಮೆ ಪ್ರಯತ್ನಿಸಿ ಎಂದು ಮನವಿ ಮಾಡಿದ್ದಾರೆ.
ಬರೀ ಕನ್ನಡ ಮಾತ್ರವಲ್ಲದೇ ದಕ್ಷಿಣ ಭಾರತದ ಇತರ ಭಾಷೆಗಳಾದ ತಮಿಳು, ಮಲೆಯಾಳಂ ತೆಲುಗು ಹಾಡುಗಳನ್ನು ಆಕೆ ಹಾಡಿದ್ದಾಳೆ. ಸಿನಿಮಾ ಹಾಡುಗಳ ಜೊತೆ ಜೊತೆ ಭಕ್ತಿಗೀತೆಗಳನ್ನು ಹಾಡಿದ್ದು, ಈಕೆಯ ಕಂಠಸಿರಿಗೆ ಭಾರತೀಯರು ತಲೆಬಾಗಿದ್ದಾರೆ. ಆಕೆ ಹಾಡುವ ವೇಳೆ ಆಕೆ ವಿದೇಶಿ ಎಂದು ಎಲ್ಲೂ ಅನಿಸುವುದೇ ಇಲ್ಲ. ಏಕೆಂದರೆ ಪ್ರತಿ ಉಚ್ಛಾರವೂ ಸ್ಪಷ್ಟತೆಯಿಂದ ಕೂಡಿದ್ದು, ಕೇಳುಗರ ಹೃದಯವನ್ನು ತಣಿಸುತ್ತಿದೆ. ಒಟ್ಟಿನಲ್ಲಿ ನಮ್ಮ ನೆಲದಲ್ಲಿ ಹುಟ್ಟಿ ಬೆಳೆದ ಮಕ್ಕಳೇ ನಮ್ಮ ಭಾಷೆ ಸಂಸ್ಕೃತಿಯನ್ನು ಕಡೆಗಣಿಸಿ ಮಾತೃಭಾಷೆ ಮಾತನಾಡಲು ತಡವರಿಸುತ್ತಿರುವಾಗ ಎಲ್ಲೋ ಬೆಳೆದ ಹುಡುಗಿಯೊಬ್ಬಳು ಹೀಗೆ ಕನ್ನಡದ ದಾಸಶ್ರೇಷ್ಠ ಪುರಂದರದಾಸರ ಹಾಡುಗಳನ್ನು ಇಷ್ಟೊಂದು ಸುಶ್ರಾವ್ಯವಾಗಿ ಹಾಡುತ್ತಿರುವುದು ನೋಡಿದರೆ ಅಚ್ಚರಿ ಮೂಡದೇ ಇರದು ಅಲ್ವಾ?