ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shetter) ಕಾಂಗ್ರೆಸ್ (Congress) ಸೇರ್ಪಡೆಗೊಂಡ ಬೆನ್ನಲ್ಲೇ ಆರಂಭಿಕ ಆಘಾತ ಉಂಟಾಗಿದೆ. ಶೆಟ್ಟರ್ ವಿರುದ್ಧ ಧಾರವಾಡ (Dharawada) ಜಿಲ್ಲಾ ಕಾಂಗ್ರೆಸ್ನಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅಭಿಮಾನಿಗಳ ಆಕ್ರೋಶಕ್ಕೆ ಶೆಟ್ಟರ್ ಗುರಿಯಾಗಿದ್ದಾರೆ.
ಪಕ್ಷದಲ್ಲಿ ಅಶಿಸ್ತಿನ ವಾತಾವರಣ ನಿರ್ಮಾಣ ಮಾಡಿದ ಹಿನ್ನಲೆ, ಸಿದ್ದರಾಮಯ್ಯ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಗಿರೀಶ ಗದಿಗೆಪ್ಪಗೌಡ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ಇದರಿಂದಾಗಿ ಗಿರೀಶ್ ಕೆಂಡಾಮಂಡಲರಾಗಿದ್ದಾರೆ. ಹೀಗಾಗಿ ಶೆಟ್ಟರ್ ಕಾಂಗ್ರೆಸ್ಗೆ ಬಂದಮೇಲೆ ಪಕ್ಷದಲ್ಲಿ ಬೇರೆಯ ರೀತಿಯ ವಾತಾವರಣ ನಿರ್ಮಾಣವಾಗಿದೆ. ಶೆಟ್ಟರ್ ಹಾಗೂ ಅವರ ಬೆಂಬಲಿಗರ ವಿರುದ್ಧ ಗಿರೀಶ್ ಅಸಮಾಧಾನ ಹೊರಹಾಕಿದ್ದಾರೆ.
ಶೆಟ್ಟರ್ ಅವರ ಆಪ್ತ ನಾಗೇಶ್ ಕಲಬುರಗಿಯಲ್ಲಿ ನಮ್ಮನ್ನು ಹಿಡಿತದಲ್ಲಿಟ್ಟಿಕೊಂಡು ನಿಯಂತ್ರಣ ಮಾಡುತ್ತಿದ್ದಾರೆ. ಧಾರವಾಡ ಜಿಲ್ಲಾ ಉಸ್ತುವಾರಿ ಪಿ.ವಿ ಮೋಹನ್, ಶೆಟ್ಟರ್ರನ್ನು ಸಿಎಂ ಮಾಡುತ್ತೇವೆ ಅಂತ ಹೇಳುತ್ತಿದ್ದಾರೆ. ಶೆಟ್ಟರ್ ಅವರು ಸೌಮ್ಯ ಸ್ವಭಾವದವರಲ್ಲ. ಅವರಿಗೆ ಬೇರೆಯದ್ದೆ ಮುಖವಿದೆ ಎಂದು ಟೀಕಿಸಿದ್ದಾರೆ.
ಶೆಟ್ಟರ್ ಪಕ್ಷಕ್ಕೆ ಬಂದ್ಮೇಲೆ ಪಂಚಮಸಾಲಿಗಳನ್ನು ತುಳಿಯುತ್ತಿದ್ದಾರೆ. ಶೆಟ್ಟರ್ ಅದು ಹೇಗೆ ಚುನಾವಣೆ ಗೆಲ್ಲುತ್ತಾರೆ ನಾವು ನೋಡುತ್ತೇವೆ. ಇನ್ಮುಂದೆ ಶೆಟ್ಟರ್ ವರ್ಸಸ್ ಪಂಚಮಿಸಾಲಿಗಳು ಎಂದು ಗಿರೀಶ್ ಗದಿಗೆಪ್ಪಗೌಡ ಸವಾಲು ಹಾಕಿದ್ದಾರೆ.