ಚಾಮರಾಜನಗರ: ಪ್ರತಿ ವರ್ಷದಂತೆ ಈ ಬಾರಿಯೂ ಸಹ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ವಿದ್ಯಾರ್ಥಿಯಿನಿಯರೇ ಮೇಲುಗೈ ಸಾಧಿಸಿದ್ದಾರೆ. ಜಿಲ್ಲೆಗೆ ಐವರು ವಿದ್ಯಾರ್ಥಿಗಳು ಟಾಫರ್ ಆಗಿ ಹೊರಹೊಮ್ಮಿದ್ದು, ವಿಜ್ಞಾನ ವಿಭಾಗದಿಂದ ಎಂ. ಹರ್ಷಿತಾ(589) ಶೇ.98.16 ಪಡೆದುಕೊಂಡರೆ, ಕಲಾ ವಿಭಾಗದಿಂದ ಎಸ್.ವರ್ಷಿತಾ(581) ಶೇ.92.8 ಗಳಿಸಿದ್ದಾರೆ. ಆದರೆ, ಅಚ್ಚರಿ ಮೂಡಿಸುವಂತೆ ವಾಣಿಜ್ಯ ವಿಭಾಗದಲ್ಲಿ ಮೂವರು ವಿದ್ಯಾರ್ಥಿಗಳು ಒಂದೇ ಸಮನಾದ ಅಂಕವನ್ನು ಪಡೆದಿದ್ದಾರೆ. ಎಸ್.ಆರ್. ನೆಹನಾ ಛಾಯ, ಸಾಜಿದಾ, ಎಸ್.ಕೆ.ನಂದಿತಾ ಈ ಮೂವರು ಸಹ 586(ಶೇ.97.66) ಅಂಕ ಗಳಿಸುವ ಮೂಲಕ ಜಿಲ್ಲೆಗೆ ಟಾಫರ್ ಆಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಟಾಫರ್ ಆಗಿರುವ ಎಂ. ಹರ್ಷಿತಾ ಕೊಳ್ಳೇಗಾಲದ ಪಟ್ಟಣದಲ್ಲಿರುವ ನಿಸರ್ಗ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಇವರು ಕೆಸ್ತೂರು ಗ್ರಾಮದವರಾಗಿದ್ದು, ಪ್ರಸ್ತುತ ಚಾಮರಾಜನಗರದಲ್ಲಿ ವಾಸವಾಗಿದ್ದಾರೆ. ಹನೂರಿನ ಎಲ್ಲೇಮಾಳ ಗ್ರಾಪಂನ ಪಿಡಿಒ ಕೆ.ಎಸ್.ಮಂಜುನಾಥ್ ಹಾಗೂ ಜ್ಯೋತಿ ಅವರ ಪುತ್ರಿಯಾಗಿದ್ದಾರೆ.
ಕಲಾ ವಿಭಾಗದಲ್ಲಿ ಟಾಫರ್ ಆಗಿರುವ ಎಸ್. ವರ್ಷಿತಾ ಕೊಳ್ಳೇಗಾಲದ ಎಸ್.ವಿ.ಕೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿದ್ದರು. ಇವರು ವಕೀಲ ಶ್ರೀರಾಮುಲು ಹಾಗೂ ಕರ್ಪಗಂ ಅವರ ಪುತ್ರಿಯಗಿದ್ದು, ಕಾಲೇಜಿ ಇವರೊಬ್ಬರೇ ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿ ಎಂಬುದು ವಿಶೇಷವಾಗಿದೆ.
ವಾಣಿಜ್ಯದ ವಿಭಾಗದ ಟಾಫರ್ ಗಳಾಗಿರುವ ನೆಹನಾ ಛಾಯ ಗುಂಡ್ಲುಪೇಟೆ ಜೆಎಸ್ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಇವರ ತಂದೆ ಸುಬ್ಬಣ್ಣ ರೈತರಾಗಿದ್ದು, ಇವರ ತಾಯಿ ರಾಜೇಶ್ವರಿ ಗುಂಡ್ಲುಪೇಟೆ ತಾಲೂಕು ಕಚೇರಿಯಲ್ಲಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮತ್ತೋರ್ವ ವಿದ್ಯಾರ್ಥಿನಿ ಸಾಜಿದಾ ಹನೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಓದಿದ್ದು, ಇವರ ತಾಯಿ ಯಾಸ್ಮಿನ್ ಆಶ್ರಯದಲ್ಲಿ ಬೆಳೆದಿದ್ದಾರೆ. ತಂದೆ ಸೈಯದ್ ಆಸೀಪ್ ಅವರು ಕೆಲ ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿನಿ ಎಸ್.ಕೆ.ನಂದಿತಾ ಕೊಳ್ಳೇಗಾಲದ ನಿಸರ್ಗ ಪದವಿ ಪೂರ್ವ ಕಾಲೇಜಿನ ಸ್ಟೂಡೆಂಟ್ ಆಗಿದ್ದು, ಇವರ ತಂದೆ ಕೃಷ್ಣ ಹನೂರಿನಲ್ಲಿ ಎಎಸ್ಐ ಆಗಿದ್ದಾರೆ. ತಾಯಿ ಮಮತಾ ಗೃಹಿಣಿ.
2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಗೆ ಶೇ.81.92 ರಷ್ಟು ಫಲಿತಾಂಶ ಬಂದಿದ್ದು ರಾಜ್ಯದಲ್ಲಿ ಜಿಲ್ಲೆಯು 12ನೇ ಸ್ಥಾನಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕಳೆದ ವರ್ಷ ಶೇ.63.02 ರಷ್ಟು ಫಲಿತಾಂಶ ದಾಖಲಿಸಿ ರಾಜ್ಯದಲ್ಲಿ 18ನೇ ಸ್ಥಾನ ಗಳಿಸಿತ್ತು. ಜಿಲ್ಲೆಯಲ್ಲಿ 24ಸರ್ಕಾರಿ, 7 ಅನುದಾನಿತ ಹಾಗೂ 26 ಖಾಸಗಿ ಕಾಲೇಜುಗಳು ಸೇರಿದಂತೆ 60 ಪಿಯು ಕಾಲೇಜುಗಳಿವೆ.
ನಗರದ ವಿದ್ಯಾವಿಕಾಸ ಪದವಿ ಪೂರ್ವ ಕಾಲೇಜಿಗೆ ಶೇ.100 ಫಲಿತಾಂಶ ಬಂದಿದ್ದು, ತಾಲೂಕಿನ ಕುದೇರು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶೇ.91.16 ಫಲಿತಾಂಶ, ಗುಂಡ್ಲುಪೇಟೆ ಜೆಎಸ್ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿಗೆ ಶೇ.95.65 ಫಲಿತಾಂಶ ಬಂದು ಜಿಲ್ಲೆಗೆ ಅತಿ ಹೆಚ್ಚು ಫಲಿತಾಂಶ ಬಂದ ಕಾಲೇಜುಗಳಾಗಿವೆ.
12ನೇ ಸ್ಥಾನಕ್ಕೆ ಜಿಗಿದ ಫಲಿತಾಂಶ
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯು ಕಳೆದ ಬಾರಿ 18ನೇ ಸ್ಥಾನದಲ್ಲಿತ್ತು. ಆದರೆ, ಈ ಬಾರಿ 12ನೇ ಸ್ಥಾನ ಪಡೆಯುವ ಮೂಲಕ ಫಲಿತಾಂಶದಲ್ಲಿ ಉತ್ತಮ ಸಾಧನೆ ತೋರಿದೆ. ಪಿಯುಸಿ ವಿದ್ಯಾರ್ಥಿಗಳಿಗೆ ಕೈಗೊಂಡಿದ್ದ ವಿಶೇಷ ತರಗತಿ ಸೇರಿದಂತೆ ಇತರೆ ಹಲವು ಯೋಜನೆಗಳು ಉತ್ತಮ ಫಲಿತಾಂಶ ಬರಲು ಕಾರಣವಾಗಿದೆ.
ಈ ಬಗ್ಗೆ ವಿದ್ಯಾರ್ಥಿಗಳು ತಮ್ಮ ಸಂತಸ ಕ್ಷಣ ಹಂಚಿಕೊಂಡಿದ್ದಾರೆ ಇಲ್ಲಿದೆ ಸಂಪೂರ್ಣ ಮಾಹಿತಿ
ಜಿಲ್ಲೆಗೆ ಟಾಫರ್ ಆಗಿರುವುದು ತುಂಬಾ ಖುಷಿ ತಂದಿದೆ. ನನಗೆ ಪ್ರೋತ್ಸಾಹ ನೀಡಿದ ಎಲ್ಲಾ ಪ್ರಾಧ್ಯಾಪಕರು ಹಾಗೂ ನನ್ನ ತಂದೆ-ತಾಯಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಪ್ರತಿದಿನ ಆನ್ಲೈನ್ ತರಗತಿ ಮತ್ತು ನಿರಂತರವಾದ ಓದು ಕಾರಣವಾಯಿತು. ವೈದ್ಯಕೀಯ ಶಿಕ್ಷಣವನ್ನು ಮಾಡಲು ಗುರಿ ಹೊಂದಿದ್ದೇನೆ ಎಂದು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಹರ್ಷಿತಾ ಹೇಳಿಕೊಂಡಿದ್ದಾರೆ.
ಕಲಾ ವಿಭಾಗದಲ್ಲಿ ಟಾಫರ್ ಆಗಿರುವುದಕ್ಕೆ ಸಂತೋಷವಾಗಿದ್ದು, ಕಷ್ಟ ಪಟ್ಟು ಓದಿದ್ದಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಕಾಲೇಜಿಗೆ ನಾನೊಬ್ಬಳೇ ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿಯಾಗಿದ್ದರಿಂದ ತರಗತಿ ಮುಗಿಸುಕೊಂಡು ಮನೆಗೆ ಬಂದ ನಂತರ ಅದನ್ನು ಇಂಗ್ಲಿಷ್ ಗೆ ತರ್ಜುಮೆ ಮಾಡಿಕೊಂಡು ಓದಿಕೊಳ್ಳುತ್ತಿದ್ದೆ. ಆ ದಿನ ವಿಷಯಗಳನ್ನು ಅದೇ ದಿನ ಓದುತ್ತಿದ್ದರಿಂದ ಉತ್ತಮ ಗಳಿಸಲು ಸುಲಭವಾಯಿತು ಎಂದು ಕಲಾ ವಿಭಾಗದ ಎಸ್. ವರ್ಷಿತಾ ಮಾತು.
ವಾಣಿಜ್ಯ ವಿಭಾಗದಲ್ಲಿ ಟಾಫರ್ ಆಗಿರುವುದಕ್ಕೆ ಹರ್ಷವಾಗುತ್ತಿದ್ದು, ನಮ್ಮ ಪೋಷಕರು ಹಾಗೂ ಪ್ರಾಧ್ಯಾಪಕರ ಸಹಕಾರದಿಂದ ಇದು ಸಾಧ್ಯವಾಯಿತು. ಅವರ ಮಾರ್ಗದರ್ಶನದಿಂದ ಮತ್ತು ಪ್ರತಿದಿನ 5ರಿಂದ6 ಗಂಟೆಗಳ ಕಾಲ ಓದಿದ ಪ್ರತಿಫಲದಿಂದ ಟಾಫರ್ ಆಗಿದ್ದೇನೆ ಎಂದು ವಾಣಿಜ್ಯ ವಿಭಾಗದ ನೆಹಾನಾ ಛಾಯ ಖುಷಿ ಪಟ್ಟಿದ್ದಾಳೆ.
ವಾಣಿಜ್ಯ ವಿಭಾಗದಲ್ಲಿ ಟಾಫರ್ ಆಗಿರುವುದಕ್ಕೆ ಖುಷಿಯಾಗಿದೆ. ಈ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ನಮ್ಮ ಪ್ರಾಧ್ಯಾಪಕರು ಹಾಗೂ ಪೋಷಕರ ಪ್ರೋತ್ಸಾಹದಿಂದ ಸಾಧ್ಯವಾಯಿತು. ಅವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ವಾಣಿಜ್ಯ ವಿಭಾಗ ವಿದ್ಯಾರ್ಥಿನಿ ಎಸ್. ಕೆ. ನಂದಿತಾ ಹೇಳಿದರು.
ವಾಣಿಜ್ಯ ವಿಭಾಗದಲ್ಲಿ ಟಾಫರ್ ಆಗಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ನಮ್ಮ ಪ್ರಾಧ್ಯಾಪಕರು ತುಂಬಾ ಚೆನ್ನಾಗಿ ಪಾಠ ಮಾಡಿದ್ದರಿಂದ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು ಎಂದು ವಾಣಿಜ್ಯ ವಿಭಾಗ ವಿದ್ಯಾರ್ಥಿನಿ ಸಾಜಿದಾ ತುಂಭಾ ಹೆಮ್ಮೆಯಿಂದ ಹೇಳಿಕೊಂಡರು.
ವರದಿ: ಪ್ರಮೋದ್. ಆರ್. ಕಿಲಗೆರೆ, ಚಾಮರಾಜನಗರ