ಹುಬ್ಬಳ್ಳಿ: ಹಬ್ಬ ಯಾವುದೇ ಇರಲಿ ಹುಬ್ಬಳ್ಳಿಯಲ್ಲಿ ಆಚರಣೆ ಅಂದರೆ ನಿಜಕ್ಕೂ ಅದೊಂದು ವಿಶೇಷವೇ ಸರಿ. ಸಣ್ಣ ಹಬ್ಬವಿದ್ದರೂ ಅದ್ದೂರಿಯಾಗಿ ಆಚರಣೆ ಮಾಡುವ ಹುಬ್ಬಳ್ಳಿಯಲ್ಲಿ ಮುಸ್ಲಿಂ ಧರ್ಮದ ಪವಿತ್ರ ರಂಜಾನ್ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಹಾಗಿದ್ದರೇ ಬನ್ನಿ ಪವಿತ್ರ ರಂಜಾನ್ ಆಚರಣೆ ಝಲಕ್ ಹೇಗಿದೆ ನೋಡಿಕೊಂಡು ಬರೋಣ ಬನ್ನಿ.
ಹುಬ್ಬಳ್ಳಿಯ ಪ್ರತಿಷ್ಠಿತ ಈದ್ಗಾ ಮೈದಾನ ಸೇರಿದಂತೆ ಲ್ಯಾಮಿಂಗ್ಟನ್ ರೋಡ್, ಚೆನ್ನಮ್ಮ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್ ಆವರಣದಲ್ಲಿ ಲಕ್ಷಾಂತರ ಮುಸ್ಲಿಂ ಬಾಂಧವರು ರಂಜಾನ್ ಕೊನೆಯ ದಿನದ ಪ್ರಾರ್ಥನೆ ಸಲ್ಲಿಸಿದರು. ಹೌದು.. ಮುಸ್ಲಿಮರ ಪವಿತ್ರ ಮಾಸ ರಂಜಾನ್ ಶುಕ್ರವಾರ ಮುಗಿದಿದ್ದು, ಶನಿವಾರ ಶವ್ವಲ್ ಮೊದಲನೇ ದಿನದಂದು ಈದ್-ಉಲ್- ಫಿತರ್ (ರಂಜಾನ್) ಹಬ್ಬ ಆಚರಿಸಿದ್ದಾರೆ. ರಂಜಾನ್ ಹಬ್ಬದ ಸಂಪ್ರದಾಯದಂತೆ ಒಂದು ತಿಂಗಳ ಕಾಲ ಮುಸ್ಲಿಮರು ಉಪವಾಸ ವೃತ ಆಚರಿಸಿದ್ದಾರೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅನ್ನ, ನೀರು ಬಿಟ್ಟು ಉಪವಾಸ ವೃತ ಆಚರಿಸುತ್ತಾರೆ. ಉಪವಾಸ (ರೋಜಾ) ಮಾತ್ರವಲ್ಲದೇ ದಾನ ( ಝಕಾತ್) ನಮಾಜ್, ಕುರಾನ್ ಪಠನ, ತರಾವೀಹ್ ಮಾಡುವ ಮೂಲಕ ದೇವರನ್ನು ( ಅಲ್ಲಾಹ್ ನನ್ನು) ಸ್ಮೃತಿಸಲಾಗುತ್ತದೆ.
ಇನ್ನೂ ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ಇದು ಒಂಬತ್ತನೇ ತಿಂಗಳು. ಲೂನಾರ್ ಕ್ಯಾಲೆಂಡರ್ ಅನ್ನು ಇಸ್ಲಾಂ ಧರ್ಮದವರು ಅನುಸರಿಸುತ್ತಾರೆ. ಕಾರಣ, ಅದರಲ್ಲಿ ರಂಜಾನ್ ದಿನಾಂಕ ಬದಲಾಗುತ್ತಿರುತ್ತದೆ. ಈ ಆಚರಣೆಯ ನಂಬಿಕೆಯಂತೆ, ಅಲ್ಲಾನೊಂದಿಗಿನ ತಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು, ಉಪವಾಸ ಎಂಬುದು ಆತ್ಮಸ್ಥೈರ್ಯ ಹೆಚ್ಚಿಸಲು, ಹಸಿವಿನ ಮಹತ್ವ ಮತ್ತು ಅದೃಷ್ಟ ಸಂಪಾದನೆ ಮಾಡಲು ಶ್ರದ್ಧೆಯಿಂದ ಉಪವಾಸವನ್ನು ಆಚರಿಸುತ್ತಾರೆ. ತಿಂಗಳ ಪ್ರತಿಯೊಂದು ದಿನ ಮುಸ್ಲಿಮರು, ಈ ಹಬ್ಬದ ಆಚರಣೆ ಮೂಲಕ ಅಲ್ಲಾನಲ್ಲಿ ನಂಬಿಕೆ ಇಟ್ಟುಕೊಳ್ಳುತ್ತಾರೆ. ಪ್ರಾರ್ಥನೆ, ಕುರಾನ್ ಪಠಣ ಮತ್ತು ದಾನ-ಧರ್ಮದಲ್ಲಿ ತೊಡಗುವುದು ಮಾತ್ರವಲ್ಲದೇ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ತಮ್ಮ ಒಡನಾಟವನ್ನು ಇನ್ನಷ್ಟು ಗಟ್ಟಿಯಾಗಿಸುತ್ತಾರೆ.
ಸೂರ್ಯೋದಯದಕ್ಕಿಂತ ಮುಂಚೆ ಕುಟುಂಬ ಸದಸ್ಯರೊಂದಿಗೆ ಸೇವಿಸುವ ಆಹಾರ ವೇಳೆ ( ಸಹಿರಿ) ಹಾಗೂ ಸೂರ್ಯಾಸ್ತದ ವೇಳೆ ಉಪವಾಸ ಮುರಿಯುವ ವೇಳೆ (ಇಫ್ತಾರ್) ಉಪವಾಸದ ಪ್ರಮುಖ ಸಮಯ ಈಫ್ತಿಯಾರ್ ವೇಳೆಯಲ್ಲಿ ಎಲ್ಲರೂ ಒಂದೇ ಕಡೆ ಸೇರಿ ಮಸೀದಿಗಳಲ್ಲಿ, ಕೆಲವರು ಮನೆಗಳಲ್ಲಿ ಸೇರಿ ಖರ್ಜೂರ, ಬಾಳೆ ಹಣ್ಣು, ಕಲ್ಲಂಗಡಿ ಸೇರಿದಂತೆ ಎಲ್ಲಾ ಬಗೆಯ ಹಣ್ಣು- ಹಂಪಲು ತಂದು ಒಂದೆಡೆ ಸೇರಿಸಿ ಸಾಮೂಹಿಕವಾಗಿ ಸೇವಿಸುವ ಮೂಲಕ ಉಪವಾಸ ವೃತ ಮುಗಿಸುತ್ತಾರೆ. ಆ ಮೂಲಕ ಬಡವ, ಶ್ರೀಮಂತ ಉನ್ನತ, ಕನಿಷ್ಟ ಎಂಬ ಬೇಧಬಾವ ಮರೆತು ಮಾನವಿಯತೆ ಮೆರೆಯುವ ಮೂಲಕ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ. ಶಾಸಕ ಪ್ರಸಾದ್ ಅಬ್ಬಯ್ಯಾ, ಅಲ್ತಾಪ್ ಹಳ್ಳೂರು,ಅಲ್ತಾಫ್ ಕಿತ್ತೂರು, ಶಂಕರಪ್ಪ ಬಿಜವಾಡ ಮುಂತಾದವರಿದ್ದರು.