ಬೆಂಗಳೂರು: ಶ್ರೀನಿವಾಸ ವೈದ್ಯರ ನಿಧನಕ್ಕೆ ನಾಡೋಜ ಮಹೇಶ್ ಜೋಶಿ ಅವರು ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ಬೆಂಗಳೂರಿನ ಕಚೇರಿಯಲ್ಲಿ ಮಾತನಾಡಿದ ಅವರು,ಶ್ರೀನಿವಾಸ ವೈದ್ಯ ಅವರ ನಿಧನ ವಾರ್ತೆ ಆಘಾತ ತಂದಿದೆ. ಅವರ ಅಗಲುವಿಕೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಪಾರ ನಷ್ಟವಾಗಿದೆ ಎಂದರು. ಶ್ರೀನಿವಾಸ ವೈದ್ಯ ಮೂಲತಃ ಧಾರವಾಡ ಜಿಲ್ಲೆಯ ನವಲಗುಂದದಲ್ಲಿ 1936ರ ಏಪ್ರಿಲ್ 4 ರಂದು ಜನಿಸಿದ್ದರು. ತಂದೆ ಬಿ.ಜಿ. ವೈದ್ಯರು ಸುಪ್ರಸಿದ್ಧ ವಕೀಲರು. ತಾಯಿ ಸುಂದರಬಾಯಿ.
ಇವರ ಅಜ್ಜ ಎಂದರೆ ತಾಯಿಯ ತಂದೆ ನರಗುಂದಕರ್ ರಾಮರಾ ಕರ್ನಾಟಕದ ಸಪ್ತರ್ಷಿಗಳಲ್ಲೊಬ್ಬರು ಎಂದು ಗುರುತಿಸಿಕೊಂಡವರು. ಕಾಲೇಜಿನ ದಿನಗಳಲ್ಲಿ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿಯಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು. ʻಗಗ್ಗಯನ ಗಡಿಬಿಡಿʼ, ʻದಾಂಪತ್ಯದ ಬೊಂಬೆʼ, ʻತಿರುವು-ಮುರುವುʼ ಮುಂತಾದ ಅನೇಕ ನಾಟಕಗಳಲ್ಲಿ ಪಾತ್ರ ವಹಿಸಿದ್ದರು. ವಿದ್ಯಾವರ್ಧಕ ಸಂಘದವರು ಏರ್ಪಡಿಸುತ್ತಿದ್ದ ಸಾಹಿತ್ಯ ಸ್ಪರ್ಧೆಗಳಲ್ಲಿ ಅವರು ಹಲವಾರು ಬಹುಮಾನಗಳನ್ನು ಗಳಿಸಿದ್ದರು ಎಂದು ಮಹೇಶ್ ಜೋಶಿ ನೆನಪಿಸಿಕೊಂಡಿದ್ದಾರೆ.