ಬೆಂಗಳೂರು: ಈಶ್ವರಪ್ಪ ಅವರಿಗೆ ಪ್ರಧಾನಿ ಮೋದಿ ಕರೆ ಮಾಡಿದ್ದನ್ನು ರಾಜ್ಯ ಕಾಂಗ್ರೆಸ್ ಭ್ರಷ್ಟಾಚಾರದ ಅನುಮೋದನೆ ಎಂದು ಟೀಕಾ ಪ್ರಹಾರ ನಡೆಸಿದೆ. ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಈಶ್ವರಪ್ಪ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಟಿಕೆಟ್ ನಿರಾಕರಣೆ ಮಾಡಿದ ಬಳಿಕವೂ ಪ್ರತಿಭಟಿಸದೇ ಇರುವುದಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಒಪ್ಪಲಾಗುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಕರ್ನಾಟಕದ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿದ್ದ ಕೆಎಸ್ ಈಶ್ವರಪ್ಪ 2022 ರ ಏಪ್ರಿಲ್ ನಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ,
ಬೆಳಗಾವಿಯ ಸಾರ್ವಜನಿಕ ಕಾಮಗಾರಿಗಳಲ್ಲಿ ಈಶ್ವರಪ್ಪ ಶೇ.40 ರಷ್ಟು ಕಮಿಷನ್ ಕೇಳುತ್ತಿದ್ದಾರೆ ಎಂಬ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದ. ಈ ಪ್ರಕರಣದ ತನಿಖೆಯಲ್ಲಿ ಕೆಎಸ್ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು. ಈ ಬಳಿಕ ಈಶ್ವರಪ್ಪ ಸ್ವ ಇಚ್ಛೆಯಿಂದ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸುತ್ತಿರುವುದಾಗಿ ಘೋಷಿಸಿದ್ದರು ಆದರೆ ಪುತ್ರ ಕಾಂತೇಶ್ ಗೆ ಟಿಕೆಟ್ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಪಕ್ಷ ಚನ್ನಬಸಪ್ಪ ಅವರಿಗೆ ಶಿವಮೊಗ್ಗ ನಗರ ಕ್ಷೇತ್ರದಿಂದ ಟಿಕೆಟ್ ಘೋಷಣೆ ಮಾಡಿತ್ತು. ಈಶ್ವರಪ್ಪ ಅವರಂತಹ ನಾಯಕರನ್ನು ಪ್ರಶಂಸಿಸುವುದರ ಮೂಲಕ ಬಿಜೆಪಿ ತಾನು ಅಕ್ರಮ ಚಟುವಟಿಕೆಗಳನ್ನು ಹಾಗೂ ಭ್ರಷ್ಟಾಚಾರವನ್ನು ಅನುಮೋದಿಸುತ್ತದೆ ಎಂಬ ಸಂದೇಶ ರವಾನೆ ಮಾಡಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಟೀಕಾಪ್ರಹಾರ ನಡೆಸಿದೆ.