ಬೆಂಗಳೂರು: ಬೆಂಗಳೂರು ಮೆಟ್ರೋ ರೈಲ್ವೇ ನಿಗಮ ಚಿಕ್ಕಜಾಲದ ಬಳಿ ‘ಯು ಗರ್ಡರ್’ ಅಳವಡಿಕೆ ಮಾಡುತ್ತಿದೆ. ಕೆ.ಆರ್.ಪುರ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ಗರ್ಡರ್’ ಅಳವಡಿಕೆ ಮಾಡುತ್ತಿದೆ. ಸಮಯ ಹಾಗೂ ನಿರ್ಮಾಣ ವೆಚ್ಚ ಕಡಿಮೆ ಮಾಡಲು ಈ ಮಾದರಿಯ ಗರ್ಡರ್ಗಳ ಬಳಸಲಾಗುತ್ತಿದೆ. ನಮ್ಮ ಮೆಟ್ರೊ ಕಳೆದ ವರ್ಷ ಜೂನ್ನಲ್ಲಿ ಹೊರವರ್ತುಲ ರಸ್ತೆ-ಏರ್ಪೋರ್ಟ್ ಮಾರ್ಗದಲ್ಲಿ ಮೊದಲ ಬಾರಿಗೆ ‘ಯು ಗರ್ಡರ್’ಗಳ ಬಳಕೆ ಮಾಡಿತ್ತು. ಯಲಹಂಕ ಐಎಎಫ್ನಿಂದ ಕೆಂಪೇಗೌಡ ವಿಮಾನ ನಿಲ್ದಾಣದವರೆಗಿನ 15.1 ಕಿ.ಮೀ. ಈ ಮಾರ್ಗದಲ್ಲಿ 784 ಯು ಗರ್ಡರ್ಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಪ್ರತಿಯೊಂದು ಯು ಗರ್ಡರ್ಗಳು 28 ಮೀ. ಉದ್ದವಿದ್ದು, 165 ಟನ್ ತೂಕ ಇರುತ್ತವೆ. ಇವುಗಳನ್ನು ಕ್ರೇನ್ ಮೂಲಕ ಪಿಲ್ಲರ್ ಮೇಲೇರಿಸಲಾಗುತ್ತಿದೆ.
ದೊಡ್ಡಜಾಲದ ಮೆಟ್ರೋ ಶೆಡ್ನಲ್ಲಿ ‘ಯು ಗರ್ಡರ್ ರೂಪಿಸಲಾಗಿದೆ. ಸಾಮಾನ್ಯವಾಗಿ 2.2 ಮೀಟರ್ನಿಂದ 2.5 ಮೀಟರ್ ಉದ್ದದ ‘ಬಾಕ್ಸ್ ಗರ್ಡರ್’ಗಳನ್ನು ನಮ್ಮ ಮೆಟ್ರೊ ಮಾರ್ಗ ನಿರ್ಮಾಣ ಸಂದರ್ಭದಲ್ಲಿ ಬಳಸಲಾಗುತ್ತಿದೆ, ಆದರೆ, ಯು ಗರ್ಡರ್ ಇವುಗಳಿಗಿಂತ ಸಾಕಷ್ಟುಉದ್ದವಾಗಿವೆ. ಎರಡು ಪಿಲ್ಲರ್ಗಳ ನಡುವೆ ಯು-ಗರ್ಡರ್ ಅಳವಡಿಸಬಹುದು. ಪದೇಪದೇ ಬಾಕ್ಸ್ ಗರ್ಡರ್ಗಳನ್ನು ಅಳವಡಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಇದರ ಬದಲು ಯು-ಗರ್ಡರನ್ನು ಬಳಸಿದರೆ ಕಾಮಗಾರಿ ವೆಚ್ಚವೂ ಕಡಿಮೆಯಾಗುತ್ತದೆ. ರಾತ್ರಿ ವೇಳೆ ಈ ಕಾಮಗಾರಿ ಸುಲಲಿತವಾಗಿ ಮುಗಿಸಬಹುದು. ಈ ಮಾರ್ಗದಲ್ಲಿ ಒಟ್ಟಾರೆ 2172 ಪಿಲ್ಲರ್ಗಳನ್ನು ನಿರ್ಮಿಸಲಾಗುತ್ತಿದ್ದು, ಈವರೆಗೆ 1619 ಪಿಲ್ಲರನ್ನು ಪೂರ್ಣವಾಗಿ ನಿರ್ಮಿಸಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸುತ್ತಾರೆ.