ರಾಯ್ಪುರ : ಮದುವೆ ಮಂಟಪದ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಎಸೆದ ಆಸಿಡ್ ರೀತಿಯ ದ್ರವದಿಂದಾಗಿ ವಧು, ವರ ಮಾತ್ರವಲ್ಲದೆ ಅವರ 10 ಮಂದಿ ಸಂಬಂಧಿಕರ ಮುಖ ಬಹುತೇಕವಾಗಿ ಸುಟ್ಟುಹೋದ ಘಟನೆ ಛತ್ತೀಸ್ಗಢದ ಬಸ್ತಾರ್ ಜಿಲ್ಲೆಯಲ್ಲಿ ನಡೆದಿದೆ. ಬಸ್ತಾರ್ ಜಿಲ್ಲೆಯ ಗ್ರಾಮವೊಂದರಲ್ಲಿ ಮದುವೆ ಸಂಭ್ರಮದಲ್ಲಿದ್ದ ಕುಟುಂಬ ಈಗ ಶೋಕದಲ್ಲಿ ಮುಳುಗಿದೆ. ಆಸಿಡ್ ರೀತಿಯ ದ್ರವ ಇದಾಗಿದ್ದು, ವಧು-ವರರ ಮುಖದ ಮೇಲೆ ಸುಟ್ಟ ಗಾಯಗಳಾಗಿವೆ. 10 ಮಂದಿ ಸಂಬಂಧಿಕರೂ ಇದರಲ್ಲಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಛೋಟೆ ಅಮಾಬಲ್ ಗ್ರಾಮದಲ್ಲಿ ಸಂಜೆ ವಿವಾಹ ಸಮಾರಂಭ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
25 ವರ್ಷದ ವರ ಧರ್ಮುಧರ್ ಬಾಘೇಲ್ ಹಾಘೂ 19 ವರ್ಷದ ವಧು ಸುನೀತಾ ಕಶ್ಯಪ್ ಅವರಿಗೆ ಹೆಚ್ಚಿನ ಸುಟ್ಟ ಗಾಯಗಳಾಗಿದ್ದು, 10 ಮಂದಿ ಸಂಬಂಧಿಕರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮದುವೆ ಸಮಾರಂಭ ವಧುವಿನ ಮನೆಯಲ್ಲಿ ನಡೆಯುತ್ತಿತ್ತು. ಈ ಹಂತದಲ್ಲಿ ಹಠಾತ್ ಆಗಿ ಕರೆಂಟ್ ಹೋಗಿದೆ. ಸಂಪೂರ್ಣ ಕತ್ತಲು ಆವರಿಸಿದ್ದ ಸಂದರ್ಭದ ಲಾಭ ಪಡೆದ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ, ಮಂಟಪದಲ್ಲಿ ಕುಳಿತಿದ್ದ ವಧು ಹಾಗೂ ವರರನತ್ತ ಗುರಿಯಾಗಿಸಿ ಆಸಿಡ್ ರೀತಿಯ ಲಿಕ್ವಿಡ್ ಎಸೆದಿದ್ದಾನೆ. ಇದರ ಬೆನ್ನಲ್ಲಿಯೇ ಅವರಿಗೆ ಸುಟ್ಟ ಗಾಯಗಳಾಗಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.
ಈ ವೇಳೆ ಮಂಟಪದಲ್ಲಿ ವಧು-ವರರ ಪಕ್ಕದಲ್ಲಿ ಕುಳಿತಿದ್ದ ಅವರ ಸಂಬಂಧಿಕರಿಗೂ ಈ ಲಿಕ್ವಿಡ್ ತಗುಲಿದೆ. ಅವರಿಗೂ ಕೂಡ ಸಣ್ಣಪುಟ್ಟ ಗಾಯಗಳಾಗಿವೆ. ಮದುವೆ ಸಮಾರಂಭದಲ್ಲಿದ್ದ ನಾರಾಯಣಪುರದ ಕಾಂಗ್ರೆಸ್ ಶಾಸಕ ಚಂದನ್ ಕಶ್ಯಪ್, ಗಾಯಗೊಂಡ ಎಲ್ಲರಲ್ಲೂ ತಮ್ಮ ಹಾಗೂ ಬೆಂಗಾವಲು ಪಡೆಯ ಕಾರಿನಲ್ಲಿ ಭಾನ್ಪುರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ್ದಾರೆ.ಗಾಯಗೊಂಡ 12 ಜನರಲ್ಲಿ ವಧು, ವರ ಮತ್ತು ಇತರ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಗದಲ್ಪುರದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಬಾಘೆಲ್ ಅವರನ್ನು ಬೆಳಿಗ್ಗೆ ಡಿಸ್ಚಾರ್ಜ್ ಮಾಡಲಾಗಿದೆ, ಇತರರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ. ಘಟನೆ ಸಂಬಂಧ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.