ಬೆಂಗಳೂರು: ಈ ಬಾರಿ ಖಾಸಗಿ ಕಾಲೇಜುಗಳಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳ ಸಾಧನೆ ಕಡಿಮೆ ಎಂದು (AAP)ಎಎಪಿಯ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ(Brijesh Kalappa) ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನ ಎಎಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕಳಪೆ ಶಿಕ್ಷಣ ವ್ಯವಸ್ಥೆಯಿಂದಾಗಿ ಬಿಜೆಪಿ ಸರ್ಕಾರ ಪಿಯು ಮಕ್ಕಳ ಭವಿಷ್ಯವನ್ನು ಅಂಧಕಾರಕ್ಕೆ ತಳ್ಳಿದೆ ಎಂದು ದೂರಿದ್ದಾರೆ. ಕರ್ನಾಟಕದ ಪಿಯುಸಿ ಫಲಿತಾಂಶ ಬಂದಿದ್ದು, ಖಾಸಗಿ ಶಾಲೆಗಳಲ್ಲಿ ಶೇ. 76.67 ರಷ್ಟು ಫಲಿತಾಂಶ ಹಾಗೂ ಸರ್ಕಾರಿ ಶಾಲೆಗಳಲ್ಲಿ ಶೇ. 63.63 ರಷ್ಟು ಫಲಿತಾಂಶ ಬಂದಿದೆ.
ಆದರೆ ದೆಹಲಿಯ ಸರ್ಕಾರಿ ಕಾಲೇಜುಗಳಲ್ಲಿ ನೂರಕ್ಕೆ ನೂರಷ್ಟು ಫಲಿತಾಂಶ ಬರುತ್ತಿದೆ ಎಂದು ಹೇಳಿದ್ದಾರೆ. ಖಾಸಗಿ ಮತ್ತು ಸರ್ಕಾರಿ ಕಾಲೇಜುಗಳ ಫಲಿತಾಂಶವನ್ನು ಹೋಲಿಕೆ ಮಾಡುವುದು ತುಂಬಾ ಅವಶ್ಯಕ ಇದೆ. ಯಾಕಂದ್ರೆ ಇಂದು ನಮ್ಮ ಆಮ್ ಆದ್ಮಿ ಪಕ್ಷದ ನಿಂತಿರುವುದೇ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯ ವಿಚಾರದಲ್ಲಿ ಹಾಗಾಗಿ ಹೋಲಿಕೆಯನ್ನ ಮಾಡಲಾಗಿದೆ ಎಂದು ಬ್ರಿಜೇಶ್ ಕಾಳಪ್ಪ ಹೇಳಿದ್ದಾರೆ.