ಹುಬ್ಬಳ್ಳಿ: ಇವತ್ತು ಸಿದ್ದರಾಮಯ್ಯ ಕ್ಷಮೆ ಕೇಳಿಲ್ಲ. ಸಿದ್ದರಾಮಯ್ಯ ಕ್ಷಮೆ ಕೇಳಬೇಕು. ಈಗಾಗಲೇ ಚುನಾವಣೆ ಆಯೋಗಕ್ಕೆ ದೂರ ಕೊಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕ್ಷಮೆ ಕೇಳಬೇಕು. ಗೌರವಯುತ ಸ್ಥಾನದಲ್ಲಿರುವವರು ಹಾಗೂ ಸಾರ್ವಜನಿಕ ಜೀವನದಲ್ಲಿರುವವರು ನೈತಿಕತೆ ಇದ್ದರೇ ಕ್ಷಮೆ ಕೇಳಬೇಕು ಎಂದರು.
ಇಂದು ಅಮಿತ್ ಶಾ ಆರು ಗಂಟೆಗೆ ಬರಲಿದ್ದಾರೆ. ಜಿಲ್ಲಾ ಪದಾಧಿಕಾರಿಗಳ,ಮಂಡಳ ಅಧ್ಯಕ್ಷರ ಜೊತೆ ಸಭೆ ಮಾಡಲಿದ್ದಾರೆ. ಗದಗ, ಧಾರವಾಡ, ಹಾವೇರಿ ಜಿಲ್ಲೆಯ ಸಮಗ್ರ ಚರ್ಚೆ ಮಾಡಿ,ಸೂಕ್ತ ಮಾರ್ಗದರ್ಶನ ಮಾಡಲಿದ್ದಾರೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಬಹಳ ಬಹುಮತದಿಂದ ಗೆಲ್ಲಲಿದೆ. ಗದಗ,ಹಾವೇರಿ,ಧಾರವಾಡ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಮೀಟಿಂಗ್ ಮಾಡಲಿದ್ದೇವೆ ಎಂದು ಅವರು ಹೇಳಿದರು.
ಇನ್ನೂ 29 ರಂದು ಕುಡಚಿಗೆ ಮೋದಿ ಬರಲಿದ್ದಾರೆ. ಇದಾದ ಮೇಲೆ ಇನ್ನೊಂದು ಕಾರ್ಯಕ್ರಮ ಕೊಡಲು ನಾನು ವಿನಂತಿ ಮಾಡಿದ್ದೇನೆ. ಬೆಳಗಾವಿ ಜಿಲ್ಲೆಗೆ ಮೋದಿ ಇನ್ನೊಂದು ಕಾರ್ಯಕ್ರಮ ಕೊಡಲು ವಿನಂತಿ ಮಾಡಿದ್ದೇನೆ. ಯೋಗಿ ಆದಿತ್ಯನಾಥ ಕೂಡಾ ಬರಲಿದ್ದಾರೆ. ಕಿತ್ತೂರ ಕರ್ನಾಟಕ ಭಾಗದಲ್ಲಿ ನಮ್ಮ ಸ್ಟ್ರೈಕ್ ರೇಟ್ ಚೆನ್ನಾಗಿದೆ. ಉತ್ತರ ಖಾಂಡದಲ್ಲಿ ಇತಿಹಾಸ ಬ್ರೇಕ್ ಮಾಡಿ ನಾವು ಅಧಿಕಾರಕ್ಕೆ ಬಂದಿದ್ದೇವೆ. ಈ ಬಾರಿ ಕರ್ನಾಟಕದಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಜಗದೀಶ್ ಶೆಟ್ಟರ್ ಹೋಗಿರೋದು ಏನೂ ಎಫೆಕ್ಟ್ ಆಗಲ್ಲ. ಹಳೇ ಪ್ಲೇಯರ್ ರಿಟೈರ್ಡ್ ಆಗಿ ಅಂದಿದ್ದೇವು. ಆದರೆ ಅವರು ಮತ್ತೊಂದು ಟೀಮ್ ನಲ್ಲಿ ಆಡೋಕೆ ಹೋಗಿದ್ದಾರೆ. ಈ ಸಲ ಕಪ್ ನಮ್ದೆ. ಪರೋಕ್ಷವಾಗಿ ಶೆಟ್ಟರ್ ವಿರುದ್ದ ಜೋಶಿ ಗುಡುಗಿದರು.
ಲಿಂಗಾಯತ ಸಮುದಾಯ ನಮಗೆ ಅಸ್ತ್ರ ಅಲ್ಲ. ಲಿಂಗಾಯತರಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್. ಕಾಂಗ್ರೆಸ್ ನವರಿಗೆ,ರಾಹುಲ್ ಗಾಂಧಿ ಅವರಿಗೆ ಪ್ರೀತಿ ಇದ್ರೆ ಲಿಂಗಾಯತ ಮುಖ್ಯಮಂತ್ರಿ ಮಾಡ್ತೀವಿ ಎಂದು ಹೇಳಲಿ ನೋಡೋಣ. ನಾವು ಮೂರು ಜನ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ಚುನಾವಣೆಯ ನಂತರ ಲೀಡರ್ ಶಿಪ್ ಡಿಸೈಡ್ ಮಾಡ್ತೀವಿ. ಬಸವರಾಜ ಬೊಮ್ಮಾಯಿ ಮಾರ್ಗದರ್ಶನದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದರು.
ಬಿಎಲ್ ಸಂತೋಷ್ ಮೇಲೆ ಶೆಟ್ಟರ್ ಆರೋಪ ವಿಚಾರವಾಗಿ ಮಾತನಾಡಿದ ಅವರು, ಅಮಿತ್ ಶಾ ,ಮೋದಿ ಮಟ್ಟದಲ್ಲಿ ಈ ನಿರ್ಧಾರವಾಗಿದೆ. ಅಮಿತ್ ಶಾ ಜಗದೀಶ್ ಶೆಟ್ಟರ್ ಜೊತೆ ಮಾತಾಡಿದ್ದಾರೆ. ಹೊಸ ಜನರೇಷನ್ ಬರಬೇಕು,ನಾವು ನಿಮಗೆ ದೊಡ್ಡ ರೋಲ್ ಕೊಡಲು ತೀರ್ಮಾನ ಮಾಡಿದ್ದೇವೆ ಎಂದು ಅಮಿತ್ ಶಾ ಹೇಳಿದ್ದಾರೆ. ಮೋದಿ ಅವರ ಬಗ್ಗೆ ಉಲ್ಟಾ ಹೇಳಿದ್ರೆ ವೋಟ್ ಸಿಗಲ್ಲ ಅನ್ನೋಕೆ ರಕ್ಷಣೆ ಕಾರಣಕ್ಕೆ ಹೀಗೆ ಮಾತನಾಡುತ್ತಿದ್ದಾರೆ. ಬಿ.ಎಲ್.ಸಂತೋಷ್ ಸಂಘಟನಾ ಕಾರ್ಯದರ್ಶಿ. ಈ ತರಹ ಆರೋಪ ಮಾಡೋದು ಸರಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಆಪರೇಶನ್ ಕಮಲ ಮಾಡೋಕೆ ಬಿಡಲ್ಲ ಹೇಳಿಕೆ ವಿಚಾರ, ಹೌದು ರಾಹುಲ್ ಗಾಂಧಿ ಸರಿಯಾಗಿ ಹೇಳಿದ್ದಾರೆ. ನಾವೇ ಬಹುಮತದಿಂದ ಅಧಿಕಾರಕ್ಕೆ ಬರ್ತೀವಿ ಎಂದು ಭರವಸೆ ನೀಡಿದರು.