ಬೆಂಗಳೂರು : ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಭಾನುವಾರ ಚಿನ್ನಾಭರಣ ಮಳಿಗೆಗಳಲ್ಲಿ ಜನವೋ ಜನ… ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳ ಚಿನ್ನಾಭರಣ ಮಳಿಗೆಗಳಲ್ಲಿ ಖರೀದಿದಾರರು ಅತ್ಯಂತ ಉತ್ಸಾಹ, ಸಡಗರದಿಂದ ಆಭರಣಗಳನ್ನು ಖರೀದಿಸಿದರು. ಬಹುತೇಕ ಮಳಿಗೆಗಳಲ್ಲಿ ಗ್ರಾಹಕರಿಗೆ ಭರಪೂರ ಕೊಡುಗೆಗಳನ್ನು ನೀಡಲಾಗಿತ್ತು.
ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಜನ ಸಂಕಷ್ಟಕ್ಕೆ ಸಿಲುಕಿದರೂ, ಇದೀಗ ಚೇತರಿಸಿಕೊಳ್ಳುತ್ತಿದ್ದು, ಅಕ್ಷಯ ತೃತೀಯದ ದಿನ ಒಂದು ಚಿಕ್ಕ ಒಡವೆಯನ್ನಾದರೂ ಖರೀದಿಸಲೇಬೇಕು ಎಂಬ ಭಾವನೆಯೊಂದಿಗೆ ಮಳಿಗೆಗಳಿಗೆ ತೆರಳಿದ್ದರು. ಚಿನ್ನಾಭರಣ ಮಳಿಗೆಗಳು ತಳಿರು- ತೋರಣಗಳಿಂದ ಶೃಂಗರಿಸಿಕೊಂಡಿದ್ದವು. ಅಕ್ಷಯ ತೃತೀಯದ ಉಡುಗೊರೆಗಳು ಆಕರ್ಷಕ ಫಲಕಗಳಲ್ಲಿ ರಾರಾಜಿಸುತ್ತಿದ್ದವು.
ಸಾಯಿಗೋಲ್ಡ್ನಲ್ಲಿ ಮುಗಿಬಿದ್ದ ಗ್ರಾಹಕರು
ಬಸವನಗುಡಿ, ಎಚ್ಎಸ್ಆರ್ ಲೇಔಟ್, ಕೆ.ಆರ್. ಪುರ, ಯಲಹಂಕ ಬಡಾವಣೆಗಳಲ್ಲಿರುವ ಶ್ರೀ ಸಾಯಿಗೋಲ್ಡ್ ಪ್ಯಾಲೇಸ್ ಆಭರಣ ಮಳಿಗೆಗಳಲ್ಲಿ ಬೆಳಗ್ಗೆ 7 ಗಂಟೆಗೇ ಖರೀದಿಗಾಗಿ ಗ್ರಾಹಕರು ಕ್ಯೂ ನಿಂತಿದ್ದರು ಸಾಕಷ್ಟು ಮಂದಿ ಹಳೆಯ ಆಭರಣವನ್ನು ತಂದು ಹೊಸ ವಿನ್ಯಾಸದ ಆಭರಣಗಳನ್ನು ಖರೀದಿಸಿದರು. ಮನೆಗೆ ಚಿನ್ನಾಭರಣವನ್ನು ವಿಶೇಷ ರಿಯಾಯಿತಿಯಲ್ಲಿ ಕೊಂಡೊಯ್ದರು.
ಅಕ್ಷಯ ತೃತಿಯ ರಾಜ್ಯದ ಜನರ ಒಂದು ಭಾವನಾತ್ಮಕ ನಂಬಿಕೆಯ ಬಂಗಾರದ ಹಬ್ಬ. 2019ಕ್ಕಿಂತಲೂ ಹೆಚ್ಚು ಅದ್ಧೂರಿಯಾಗಿ, ಸಂಭ್ರಮದಿಂದ ಜನ ಚಿನ್ನ, ಬೆಳ್ಳಿ, ವಜ್ರಾಭರಣಗಳನ್ನು ಖರೀದಿಸಿದ್ದಾರೆ.ಅವರಿಗೆ ಯಶಸ್ಸು ಸಿಗಲಿ ಎಂದು ಶ್ರೀ ಸಾಯಿಗೋಲ್ಡ್ ಪ್ಯಾಲೇಸ್ ಆಭರಣ ಮಳಿಗೆಯ ಮಾಲೀಕ ಹಾಗೂ ಕರ್ನಾಟಕ ರಾಜ್ಯದ ಚಿನ್ನಾಭರಣ ವ್ಯಾಪಾರಿಗಳ ಸಂಘದ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಡಾ. ಟಿ. ಎ.ಶರವಣ ಆಶಿಸಿದರು.
2020 ಮತ್ತು 2021ನೇ ಸಾಲಿನಲ್ಲಿ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಅಕ್ಷಯ ತೃತೀಯದಂದು ಹೆಚ್ಚು ವಹಿವಾಟು ನಡೆದಿರಲಿಲ್ಲ. ಅದಕ್ಕಿಂತ ಹಿಂದೆ ಅಂದರೆ 2019ರಲ್ಲಿ ರಾಜ್ಯಾದ್ಯಂತ ಉತ್ತಮ ವಹಿವಾಟು ನಡೆದಿತ್ತು. ಇದೀಗ ಅದಕ್ಕಿಂತ ಐದು ಪಟ್ಟು ಹೆಚ್ಚಾಗಿಯೇ ನಡೆದಿದೆ ಎಂದು ಡಾ. ಟಿ.ಎ.ಶರವಣ ಹೇಳಿದರು.