ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Assembly Election) ಮೇ.10 ರಂದು ಮತದಾನ (Voting) ನಡೆಯಲಿದ್ದು, 13 ರಂದು ಮತ ಎಣಿಕೆ ಆರಂಭವಾಗುತ್ತದೆ. ಈಗಾಗಲೇ ನಮಪತ್ರ ಪರಿಶೀಲನೆ ಮುಕ್ತಾಯವಾಗಿದ್ದು, ಉಮೇದುವಾರಿಕೆ ವಾಪಸ್ ಪಡೆಯಲು ಇಂದೇ (ಏ.24) ಕೊನೆಯ ದಿನವಾಗಿದೆ. ಅಧಿಕೃತವಾಗಿ ಕಣದಲ್ಲಿ ಉಳಿಯುವವರು ಯಾರು ಎಂಬುದು ಇಂದು ಸ್ಪಷ್ಟವಾಗಲಿದೆ. ಪ್ರಸ್ತುತ ಕಣದಲ್ಲಿ ಒಟ್ಟು 3130 ಅಭ್ಯರ್ಥಿಗಳಿದ್ದಾರೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ (Congress), ಬಿಜೆಪಿ (BJP), ಎಎಪಿ (AAP) ಹಾಗೂ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರವಾಗಿ ಸರ್ಧಿಸಿರುವ ಅಭ್ಯರ್ಥಿಗಳ ಅಂಕಿ-ಸಂಖ್ಯೆ ಇಲ್ಲಿದೆ..
ಕಾಂಗ್ರೆಸ್ನಿಂದ 223 ಅಭ್ಯರ್ಥಿಗಳು, ಬಿಜೆಪಿಯಿಂದ 224, ಎಎಪಿಯಿಂದ 212, ಜೆಡಿಎಸ್ನಿಂದ 211, ಬಿಎಸ್ಸಿಯಿಂದ 137, ಸಿಪಿಐಎಂಯಿಂದ 4, ಎನ್ಪಿಪಿಯಿಂದ 4, ನೋಂದಾಯಿತ ಮತ್ತು ಮಾನ್ಯತೆರಹಿತ 736 , ಸ್ವತಂತ್ರ ಅಥವಾ ಪಕ್ಷೇತರ 1379, ಒಟ್ಟು 3130 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಆದರೆ ಇಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ್ದರಿಂದ, ಅಖಾಡಕ್ಕಿಳಿದ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದರೇ, ಸಂಜೆ ವೇಳೆಗೆ ಕಣದಲ್ಲಿ ಉಳಿಯುವ ಅಭ್ಯರ್ಥಿಗಳು ಎಷ್ಟು ಎಂದು ಪಕ್ಕಾ ಮಾಹಿತಿ ದೊರೆಯುತ್ತದೆ.
ಬಂಡಾಯ ಅಭ್ಯರ್ಥಿಗಳ ಮನವೊಲಿಕೆಗೆ ಮುಂದಾದ ಕೈ-ಕಮಲ; ನಾಮಪತ್ರ ವಾಪಸ್ ಪಡೆಯುವಂತೆ ಮನವಿ
ಇನ್ನು ಈ ಬಾರಿಯ ವಿಧಾನಸಭಾ ಚುನಾವಣೆ ಸಾಕಷ್ಟು ಪೈಪೋಟಿಯಿಂದ ಕೂಡಿದ್ದು ಪ್ರಮುಖ ಮೂರು ಪಕ್ಷಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಬಂಡಾಯವೆದ್ದ ಆಕಾಂಕ್ಷಿಗಳಲ್ಲಿ ಕೆಲವರು ಪಕ್ಷೇತರವಾಗಿ ನಾಮಿನೇಷನ್ ಫೈಲ್ ಮಾಡಿದ್ದು ಪ್ರಬಲ ಮೂರು ಪಕ್ಷಗಳಿಗೆ ಹೊಡೆತ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆ ನಾಮಪತ್ರ ವಾಪಸ್ ಪಡೆಯಲು ಮೂರು ಪಕ್ಷಗಳು ಮನವಿ ಮಾಡಿಕೊಳ್ಳುತ್ತಿವೆ.
ಚಿತ್ರದುರ್ಗ ಜಿಲ್ಲೆಯಲ್ಲಿನ ವಿಧಾನಸಭಾ ಕ್ಷೇತ್ರಗಳಲ್ಲಿ ಅನೇಕ ಆಕಾಂಕ್ಷಿಗಳು ಬಂಡಾಯವೆದ್ದಿದ್ದು ಪಕ್ಷೇತರವಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ. ಹೊಸದುರ್ಗ ವಿಧಾನಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಪಕ್ಷೇತರ ಅಬ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರ ಮನವೊಲಿಕೆಗೆ ಪಕ್ಷದ ನಾಯಕರು ಮನವೊಲಿಸಲು ಯತ್ನಿಸಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಕಾಂಗ್ರೆಸ್ನ ಬಿ.ಜಿ.ಗೋವಿಂದಪ್ಪ, ಬಿಜೆಪಿಯ ಎಸ್.ಲಿಂಗಮೂರ್ತಿ, ಪಕ್ಷೇತರ ಅಬ್ಯರ್ಥಿ ಗೂಳಿಹಟ್ಟಿ ಶೇಖರ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಚಿತ್ರದುರ್ಗ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆ ಮಾಜಿ ಶಾಸಕ ಎಸ್ ಕೆ ಬಸವರಾಜನ್, ಪಕ್ಷೇತರವಾಗಿ ಪತ್ನಿ ಸೌಭಾಗ್ಯ ಬಸವರಾಜನ್ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಈ ಹಿನ್ನಲೆ ಕಾಂಗ್ರೆಸ್ ಪಕ್ಷ ತೆರೆಮರೆಯಲ್ಲಿ ಮನವೊಲಿಸಲು ಯತ್ನಿಸುತ್ತಿದ್ದರೂ, ಪಕ್ಷೇತರ ಅಬ್ಯರ್ಥಿಯಾಗಿ ಕಣದಲ್ಲಿ ಉಳಿಯುವ ಸಾಧ್ಯತೆ ಹೆಚ್ಚಿದೆ. ಇದರಿಂದ ಬಿಜೆಪಿಯ ಜಿ.ಹೆಚ್.ತಿಪ್ಪಾರೆಡ್ಡಿ, ಕಾಂಗ್ರೆಸ್ನ ಕೆ.ಸಿ.ವಿರೇಂದ್ರ ಪಪ್ಪಿ ಜೆಡಿಎಸ್ನ ರಘು ಆಚಾರ್, ಪಕ್ಷೇತರ ಅಭ್ಯರ್ಥಿ ಸೌಭಾಗ್ಯ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಮೀಸಲು ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಮಿಸ್ ಆದ ಹಿನ್ನೆಲೆ ಬಂಜಾರ ಸಮುದಾಯದ ಡಾ.ಜಯಸಿಂಹ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಟಿಹೆಚ್ಓ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶ ಮಾಡಲು ಇಚ್ಚಿಸಿದ್ದ ಇವರು ಬಿಜೆಪಿ ಟಿಕೆಟ್ ನೀಡುತ್ತದೆ ಎಂದು ಭರವಸೆಯಲ್ಲಿದ್ದರು. ಕಾಂಗ್ರೆಸ್ ಅಭ್ಯರ್ಥಿ ಹೆಚ್.ಆಂಜನೇಯ, ಬಿಜೆಪಿ ಅಭ್ಯರ್ಥಿ ಎಂ.ಚಂದ್ರಪ್ಪ ನಡುವೆ ಸ್ಪರ್ಧೆ ಇದೆ.
ಕುಂದಗೋಳದಲ್ಲಿ ತ್ರಿಕೋನ ಸ್ಪರ್ದೆ ಹಿನ್ನೆಲೆ ಪಕ್ಷೇತರ ಅಭ್ಯರ್ಥಿ ಎಸ್ ಐ ಚಿಕ್ಕನಗೌಡರ ಅವರು ನಾಮಪತ್ರ ವಾಪಸ್ ತಗೆದುಕೊಳ್ಳುವಂತೆ ಮನವೊಲಿಸಲು ಬಿಜೆಪಿ ಅಭ್ಯರ್ಥಿ ಎಮ್ ಆರ್ ಪಾಟೀಲ್ ಕಸರತ್ತು ನಡೆಸಿದ್ದಾರೆ. ಈ ಸಂಬಂಧ ಇಂದು ಮಾಜಿ ಶಾಸಕ ಎಸ್ ಐ ಚಿಕ್ಕನಗೌಡರ ಅವರ ಮನೆಗೆ ಎಮ್ ಆರ್ ಪಾಟೀಲ್ ಭೇಟಿ ನೀಡಿದ್ದಾರೆ. ಹಾಲಿ ಶಾಸಕಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ, ಬಿಜೆಪಿ ಅಭ್ಯರ್ಥಿ ಎಮ್ಆರ್ ಪಾಟೀಲ್, ಪಕ್ಷೇತರ ಅಭ್ಯರ್ಥಿ ಎಸ್ ಐ ಚಿಕ್ಕನಗೌಡರ ನಡುವೆ ತೀವ್ರ ಹಣಾಹಣಿ ಇದೆ.