ಬೆಂಗಳೂರು: ರಾಜ್ಯದ ಎಲ್ಲ ಕಾಂಗ್ರೆಸಿಗರ ಫೋನ್ ಕದ್ದಾಲಿಕೆ ಆಗುತ್ತಿದೆ ಎಂದು ವಿರೋಧಪಕ್ಷದ ನಾಯಕ ಬಿಕೆ ಹರಿಪ್ರಸಾದ್ (BK Hariprasad) ಆರೋಪ ಮಾಡಿದ್ದಾರೆ. ಈ ಸಂಬಂಧ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕಾರ ಮಾಡಲು ಮುಖ್ಯಮಂತ್ರಿಗಳ ಕಚೇರಿ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಲಾಗಿತ್ತು ಎಂಬ ವಿಚಾರವಾಗಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಜಗದೀಶ್ ಶೆಟ್ಟರ್ ಮಾತ್ರವಲ್ಲ ನಮ್ಮೆಲ್ಲರ ದೂರವಾಣಿ ಕದ್ದಾಲಿಕೆ ಮಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು(Central and State Governments) ಚುನಾವಣೆ ಗೆಲ್ಲಲು ಎಲ್ಲಾ ಅಸಾಂವಿಧಾನಿಕ ಪ್ರಯತ್ನಗಳನ್ನೂ ಮಾಡುತ್ತಿವೆ. ಮುಖ್ಯಮಂತ್ರಿಗಳ ಕಚೇರಿ ಮಾತ್ರವಲ್ಲ ಎಲ್ಲಾ ಸಂಸ್ಥೆಗಳನ್ನೂ ದುರುಪಯೋಗ ಮಾಡಿಕೊಳ್ಳುತ್ತಿವೆ. ಐ.ಟಿ., ಇ.ಡಿ.ಯನ್ನೂ ಬಳಸಿಕೊಳ್ಳುತ್ತಿವೆ. ಇ.ಡಿ. ಒಂದು ರೀತಿ ಬಿಜೆಪಿಯ ಚುನಾವಣಾ ಘಟಕ ಎಂಬಂತಾಗಿದೆ. ಒಟ್ಟಾರೆ ತಮ್ಮ ಭ್ರಷ್ಟಾಚಾರ ಮುಂದುವರೆಸಲು ಏನಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಎಂಬ ಯತ್ನದಲ್ಲಿದ್ದಾರೆ. ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.