ಮೈಸೂರು: ಖಂಡಿತಾ ನನಗೂ ಸಿಎಂ ಆಗಬೇಕೆಂಬ ಆಸೆ ಇದೆ. ನಾನು ಸಿಎಂ ಆಗಬೇಕೆಂದು ಕ್ಷೇತ್ರದಲ್ಲಿ ಮಾತ್ರ ಕೂಗು ಕೇಳಿಬರುತ್ತಿದೆ. ರಾಜ್ಯದೆಲ್ಲೆಡೆ ಈ ಕೂಗು ಕೇಳಿದಾಗ ಸಿಎಂ ಮಾಡುವಂತೆ ಕೇಳುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಹೇಳಿದರು. ಜಿಲ್ಲೆಯಲ್ಲಿ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಇದು ರಾಜಕೀಯ ವ್ಯಭಿಚಾರನಾ ಎಂದು ಪ್ರಶ್ನಿಸಿದರು. ಇದನ್ನು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಬೇಕು. ರಾಜಕೀಯ ಹಾದರದ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಲಿಂಗಾಯತ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ತಮ್ಮ ಅಸಹನೆ ಆಕ್ರೋಶ ಹೊರ ಹಾಕಿದ್ದಾರೆ. ವರುಣದಲ್ಲಿ ಲಿಂಗಾಯತರು ಎಸ್ಸಿ, ಎಸ್ಟಿ ಎಲ್ಲರೂ ಒಂದಾಗಿದ್ದಾರೆ. ಅಹಿಂದ ಕಾರ್ಡ್ ನಡೆಯುತ್ತಿಲ್ಲ. ಹಿಂದು ಕಾರ್ಡ್ ನಡೆಯುತ್ತಿದೆ ಅನಿಸಿರಬಹುದು. ಭಯಮಿಶ್ರಿತ ಆಕ್ರೋಶವಾಗಿ ಈ ಮಾತು ಬಂದಿದೆ. ಎರಡು ರೀತಿಯ ಸಿಟ್ಟು ಸಿದ್ದರಾಮಯ್ಯಗೆ ಇದೆ. ಒಂದು ಕೋಲಾರ ವರುಣದಲ್ಲಿ ಸ್ಪರ್ಧೆ ಮಾಡಬೇಕು ಅಂತಾ ಇತ್ತು. ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ.
ಸಿದ್ದರಾಮಯ್ಯ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ. ಅವರನ್ನು ಚಕ್ರವ್ಯೂಹದಿಂದ ಬಿಡಿಸಲು ಕೃಷ್ಣ ಅವರ ಜೊತೆ ಇಲ್ಲ. ಕೃಷ್ಣ ಬಿಜೆಪಿ ಅಲ್ಲಿ ಇರುವುದು. ಡಿ.ಕೆ ಶಿವಕುಮಾರ್ ಸಹಾ ಸಿದ್ದರಾಮಯ್ಯ ಜೊತೆಗಿಲ್ಲ. ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ತಮ್ಮ ಎಲ್ಲಾ ಅಸ್ತ್ರ ಬಳಸುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಪರಮೇಶ್ವರ್ ಶಾಪ ತಟ್ಟದೆ ಬಿಡುವುದಿಲ್ಲ. ತನಗೆ ಸಿಕ್ಕದ್ದು ಬೇರೆಯವರಿಗೆ ಸಿಗಬಾರದು ಅನ್ನೋ ಮನಸ್ಥಿತಿ ಅವರಿಗಿದೆ. ಖರ್ಗೆ, ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಅನ್ನೋ ಕಾರಣಕ್ಕೆ ಈ ರೀತಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರದಂತೆ ತಡೆಯಲು ಈ ರೀತಿ ಹೇಳಿದ್ದಾರೆ ಎಂದು ಕಿಡಿಕಾರಿದರು.