ತುಮಕೂರು: ಸಂಸತ್ತಿನಲ್ಲಿ ಕಣ್ಣೀರು ಹಾಕಿಸಿದ ನಾಯಕನಿಗೆ ಕಣ್ಣೀರು ತರಿಸಿದರಷ್ಟೇ ತನ್ನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ (HD Deve Gowda) ಹೇಳಿದರು. ಜಿಲ್ಲೆಯ ಮಧುಗಿರಿಯಲ್ಲಿ ಮಾತನಾಡಿದ ಅವರು, ನಾನಿ ಹಿಂದೆಯದ್ದನ್ನ ಮೆಲುಕು ಹಾಕಿ ನೋಡಲೂ ಹೋಗುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದುಕೊಂಡಿರಲಿಲ್ಲ. ಚುನಾವಣಾ ರಾಜಕೀಯ ಸಾಕಾಗಿದೆ ಅಂತಾ ಹಿಂದೆಯೇ ಹೇಳಿದ್ದೆ. ತುಮಕೂರಿನ ಕೆಲವು ಮುಖಂಡರು ನನ್ನನ್ನು ಬಲಿಪಶು ಮಾಡಿದ್ರು ಅಂತಾ ಹೇಳಲ್ಲ. ಅವರ ಹೆಸರು ಕೂಡ ಹೇಳೋಕೆ ಹೋಗಲ್ಲ. ಆದರೆ ಸಂಸತ್ತಿನಲ್ಲಿ ನಿಂತು ಕಣ್ಣೀರು ಹಾಕುವ ಕೆಟ್ಟ ಸಂದರ್ಭ ತಂದರು. ಆ ನಾಯಕನ ಕಣ್ಣಲ್ಲಿ ನೀರು ತರಿಸಬೇಕು, ಆಗ ನನ್ನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದರು.
ನನ್ನನ್ನು ಮುಖ್ಯಮಂತ್ರಿ ಮಾಡಲು 11 ಸ್ಥಾನಗಳನ್ನು ತುಮಕೂರು ಕೊಟ್ಟಿತ್ತು. ಈಗ ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ. ಯಾವ ದೇವೇಗೌಡ ಪಾರ್ಲಿಮೆಂಟ್ನಲ್ಲಿ ನಿಂತು ಕಣ್ಣೀರು ಹಾಕುವ ಕೆಟ್ಟ ಸಂದರ್ಭ ತಂದರೋ ಆ ನಾಯಕನ ಕಣ್ಣಲಿ ನೀರು ಬರಿಸಬೇಕು. ಅವತ್ತು ನನ್ನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಭಾವುಕರಾಗಿ ಹೇಳುವ ಮೂಲಕ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರನ್ನ ಸೋಲಿಸುವಂತೆ ಪರೋಕ್ಷವಾಗಿ ಹೇಳಿದರು.
ಪ್ರಸಕ್ತ ಚುನಾವಣೆಯಲ್ಲಿ ಜೆಡಿಎಸ್ 20 ಸ್ಥಾನಗಳನ್ನು ಗೆಲ್ಲುತ್ತದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ದಳಪತಿ, ಜೆಡಿಎಸ್ಗೆ 20 ಸ್ಥಾನಗಳಷ್ಟೇ ಬರುತ್ತದೆ ಅಂತಾ ಕಾಂಗ್ರೆಸ್ನವರು ಹೇಳುತ್ತಾರೆ. ಬಹುಶಃ ಅವರಿಗೆ ಉತ್ತರ ಕೊಡಲು ಮಧುಗಿರಿ ಒಂದೇ ಸಾಕು. ನನ್ನನ್ನು ಸಿಎಂ ಮಾಡಲು ತುಮಕೂರಿನಲ್ಲಿ 11 ಸ್ಥಾನ ಗೆಲ್ಲಿಸಿಕೊಟ್ಟಿದ್ದೀರಿ ಎಂದರು.
ಮಧುಗಿರಿಯ ಕೈಮರದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ದೇವೇಗೌಡರು, ವೀರಭದ್ರಯ್ಯ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಮಧುಗಿರಿ ಜಿಲ್ಲೆಯಾಗಬೇಕೆನ್ನುವುದು ವೀರಭದ್ರಯ್ಯ ಕನಸಾಗಿದೆ. ಏಕಶಿಲೆಯನ್ನ ಟೂರಿಸ್ಟ್ ಜಾಗ, ಇಂಡಸ್ಟ್ರಿಯಲ್ ಕ್ಲಸ್ಟರ್ ಮಾಡುವುದು ಅವರ ಕನಸಾಗಿದೆ. ಮುಸ್ಲಿಂ, ಗೊಲ್ಲ, ದಲಿತರಿಗೆ ಮೀಸಲಾತಿ ಕೊಟ್ಟಿದ್ದೇನೆ ಎಂದರು.