ಪ್ರಜಾಪ್ರಭುತ್ವದ ಮತದಾನೋತ್ಸವ ದಿನವಾದ ಮೇ 10 ರಂದು ಎಲ್ಲಾ ಯುವ ಮತದಾರರು ತಪ್ಪದೆ ಮತದಾನ ಮಾಡಲು ಮಾನ್ಯ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್(Tushar Giri Nath) ರವರು ಎಲ್ಲಾ ವಿದ್ಯಾರ್ಥಿಗಳಲ್ಲಿ ಕೋರಿದರು. ಸಾರ್ವತ್ರಿಕ ವಿಧಾನಸಭೆ ಚುನಾವಣೆಯ(Karnataka Election) ಹಿನ್ನೆಲೆಯಲ್ಲಿ ದಕ್ಷಿಣ ವಲಯದ ಜಯನಗರ 4ನೇ ಬ್ಲಾಕ್ ನಲ್ಲಿರುವ ವಿಜಯ ಕಾಲೇಜಿನಲ್ಲಿ ಯುವ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಮೊದಲನೇ ಬಾರಿ ಮತ ಚಲಾಯಿಸುವವರಲ್ಲಿ ಮತದಾನ ಮಾಡಬೇಕೆಂಬ ಉತ್ಸಾಹ ಸಾಕಷ್ಟಿರಲಿದ್ದು, ತಾವು ಮತದಾನ ಮಾಡುವ ಜೊತೆಗೆ ಬೇರೆಯವರಿಂದಲೂ ಮತದಾನ ಮಾಡಿಸಬೇಕೆಂದು ತಿಳಿಸಿದರು.
ಯಾರ್ಯಾರು ಮೊದಲನೇ ಬಾರಿ ಮತದಾನ ಮಾಡುತ್ತಿದ್ದೀರಾ ಅವರೆಲ್ಲರೂ ರಾಯಭಾರಿಗಳಾಗಿ ತಮ್ಮ ಮನೆಯವರಿಗೆ ಮಾತ್ರವಲ್ಲದೆ ಅಕ್ಕ-ಪಕ್ಕದ ಮನೆಯವರಿಗೆ ತಪ್ಪದೆ ಮತದಾನದ ಮಾಡಲು ಅರಿವು ಮೂಡಿಸಲು ವಿದ್ಯಾರ್ಥಿಗಳಲ್ಲಿ ಕೋರಿದರು. ಬೆಂಗಳೂರು ನಗರದಲ್ಲಿ ಶೇ. 52 ರಷ್ಟು ಮಾತ್ರ ಮತದಾನವಾಗುತ್ತಿದ್ದು, ಅದನ್ನು ಶೇ. 75ಕ್ಕೆ ಹೆಚ್ಚಿಸಲು ಭಾರತ ಚುನಾವಣಾ ಆಯೋಗ, ಬಿಬಿಎಂಪಿ ವತಿಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಯುವ ಮತದಾರರು ತಮ್ಮ ವಿವೇಚನೆ ಹಾಗೂ ಮಾನದಂಡದ ಪ್ರಕಾರ ಸರಿಯಾದ ಅಭ್ಯರ್ಥಿಗೆ ಮತದಾನ ಮಾಡಿ. ಒಂದು ಮತವನ್ನು ಕೂಡಾ ನಾವು ಕಡೆಗಣಿಸುವಂತಿಲ್ಲ. ಆದ್ದರಿಂದ ಎಲ್ಲರೂ ತಮ್ಮ-ತಮ್ಮ ಜವಾಬ್ದಾರಿಯನ್ನು ಅರಿತು ಮತದಾನ ಮಾಡಲು ತಿಳಿಸಿದರು. ಮತದಾನ ಮಾಡದಿದ್ದರೆ ಉತ್ತಮ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯವಿಲ್ಲ. ನಾವು ನಮ್ಮ ಸುಂದರ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದರೆ ಸರಿಯಾದ ಅಭ್ಯರ್ಥಿಗೆ ಮತ ಚಾಲಾಯಿಸಿ ಗೆಲ್ಲಿಸಬೇಕು. ಜೊತೆಗೆ ಮನೆಯವರಿಗೂ ಉತ್ತಮ ಅಭ್ಯರ್ಥಿಗೆ ಮತಚಲಾಯಿಸುವಂತೆ ಮನವರಿಕೆ ಮಾಡಬೇಕೆಂದು ಹೇಳಿದರು.
ಮಾದರಿ ನೀತಿ ಸಂಹಿತೆ ಕಂಡುಬಂದಲ್ಲಿ ದೂರು ದಾಖಲಿಸಿ:
ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀವು ವಾಸಿಸುವ ಸ್ಥಳದಲ್ಲಿ ಏನಾದರು ಅಕ್ರಮ ಅಥವಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ Cvigil ತಂತ್ರಾಂಶದಲ್ಲಿ ಭಾವಚಿತ್ರ ಹಾಗೂ ವೀಡಿಯೋ ಮೂಲಕ ದೂರು ದಾಖಲಿಸಿದರೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ದಕ್ಷಿಣ ವಲಯ ಆಯುಕ್ತರಾದ ಶ್ರೀ ಜಯರಾಮ್ ರಾಯಪುರ ರವರು ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳಾಗದಿದ್ದು, ಎಲ್ಲರೂ ಯೋಚಿಸಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಉತ್ತಮ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ. ಅದೆಲ್ಲವೂ ಎಲ್ಲರೂ ಮತ ಚಲಾಯಿಸುವುದರಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಸರಿಯಾದ ದಿಕ್ಕಿನಲ್ಲಿ ನಡೆಸುವಂತಹ ಅಭ್ಯರ್ಥಿಯನ್ನು ನಾವು ಆಯ್ಕೆ ಮಾಡಬೇಕಿದೆ. ಅದು ಸಾಧ್ಯವಾಗಬೇಕಾದರೆ ಎಲ್ಲರೂ ತಪ್ಪದೆ ಮತದಾನ ಚಲಾಯಿಸಬೇಕು. ಹಣ ಅಥವಾ ಬೇರೆ ಆಮೀಷಗಳಿಗೆ ಒಳಗಾಗದೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಮತ ಹಾಕಬೇಕು ಎಂದು ತಿಳಿಸಿದರು.
ಮತದಾನ ಸಂಕಲ್ಪ ನಾಟಕ ಪ್ರದರ್ಶನ:
ಬಿ.ಎಂ.ಟಿ.ಸಿ ಹಾಗೂ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಯ ನಾಟಕ ತಂಡವು ಪ್ರಜಾಪ್ರಭುತ್ವದಲ್ಲಿ ಮತದಾನದ ಪ್ರಾಮುಖ್ಯತೆಯನ್ನು ತಿಳಿಸುವ “ಮತದಾನ ಸಂಕಲ್ಪ” ಎಂಬ ನಾಟಕವನ್ನು ಪ್ರದರ್ಶಿಸಲಾಯಿತು. ಇದೇ ವೇಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞೆ ವಿಧಿಯನ್ನು ಸ್ವೀಕರಿಸಿದರು.
ಈ ವೇಳೆ ಸ್ವೀಪ್ ಸಮಿತಿ ಅಧ್ಯಕ್ಷರಾದ ಶ್ರೀ ಸಂಗಪ್ಪ, ವಲಯ ಜಂಟಿ ಆಯುಕ್ತರು ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿಯಾದ ಡಾ. ಜಗದೀಶ್ ಕೆ. ನಾಯಕ್ ಸ್ವೀಪ್ ನೋಡಲ್ ಅಧಿಕಾರಿಯಾದ ಸಿದ್ದೇಶ್ವರ, ಉಪ ಆಯುಕ್ತರಾದ ಲಕ್ಷ್ಮೀದೇವಿ, ವಿಜಯ ಕಾಲೇಜು ಪ್ರಾಂಶುಪಾಲರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.