ಡೆಹ್ರಾಡೂನ್: ಉತ್ತರಾಖಂಡದ (Uttarakhand) ಕೇದಾರನಾಥ ದೇವಾಲಯವನ್ನು (Kedarnath Temple) ಯಾತ್ರಾರ್ಥಿಗಳಿಗೆ ತೆರೆಯಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆದರೆ ಯಾತ್ರೆ ಆರಂಭವಾಗುವುದಕ್ಕೂ ಮುನ್ನವೇ ಅವಘಡವೊಂದು ಸಂಭವಿಸಿದೆ. ದೇವಾಲಯದ ಸಿದ್ಧತೆ ಪರಿಶೀಲನೆಗೆ ತೆರಳಿದ್ದ ಉತ್ತರಾಖಂಡದ ಸರ್ಕಾರಿ ಅಧಿಕಾರಿಯೊಬ್ಬರಿಗೆ ಹೆಲಿಕಾಪ್ಟರ್ನ (Helicopter) ರೆಕ್ಕೆ ಬಡಿದು ಮೃತಪಟ್ಟಿದ್ದಾರೆ. ಗಡ್ವಾಲ್ ಮಂಡಲ್ ವಿಕಾಸ್ ನಿಗಮ್ ಲಿಮಿಟೆಡ್ (JMVN) ಹೆಲಿಪ್ಯಾನ್ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಮೃತ ಅಧಿಕಾರಿಯನ್ನು ಉತ್ತರಾಖಂಡದ ನಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ (UCADA) ಹಣಕಾಸು ನಿಯಂತ್ರಕ ಅಮಿತ್ ಸೈನಿ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ ಹೆಲಿಕಾಪ್ಟರ್ನ ಹಿಂದಿನ ಭಾಗದ ರೆಕ್ಕೆ ಅಮಿತ್ ಸೈನಿ ಅವರ ಕತ್ತನ್ನು ಸೀಳಿದೆ. ಇದರಿಂದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಘಟನೆಯ ಹಿಂದಿನ ಕಾರಣ ಇನ್ನೂ ದೃಢಪಟ್ಟಿಲ್ಲ. ಸೇನಿ ಅವರು ಹೆಲಿಕಾಪ್ಟರ್ನ ಹಿಂಬದಿಯ ರೆಕ್ಕೆಯ ಬಳಿಗೆ ಏಕೆ ಹೋದರು ಎಂಬುದು ತಿಳಿದುಬಂದಿಲ್ಲ. ಅವರು ಸೆಲ್ಫಿ ತೆಗೆಯಲು ಮುಂದಾಗಿದ್ದಾಗ ದುರ್ಘಟನೆ ನಡೆದಿದೆ ಎಂಬುದು ವದಂತಿಯಾಗಿದೆ ಎಂದು ಎಸ್ಪಿ ವಿಶಾಖ್ ಅಶೋಕ್ ಭದನೆ ತಿಳಿಸಿದ್ದಾರೆ.