ನವದೆಹಲಿ: ಮಹಿಳಾ ಕುಸ್ತಿಪಟುಗಳ (Wrestlers) ಮೇಲೆ ಲೈಂಗಿಕ ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಅಧ್ಯಕ್ಷ ಮತ್ತು ಇತರ ತರಬೇತುದಾರರ ವಿರುದ್ಧ ಈ ವರ್ಷದ ಆರಂಭದಲ್ಲಿ ಪ್ರತಿಭಟನೆ ನಡೆಸಿದ್ದ ಭಾರತದ ಕುಸ್ತಿಪಟುಗಳು ಈಗ ಮತ್ತೆ ಅಖಾಡಕ್ಕಿಳಿದಿದ್ದಾರೆ. ಫೆಡರೇಶನ್ ಅಧ್ಯಕ್ಷ ಬ್ರಿಜ್ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ 7 ಮಹಿಳಾ ಕುಸ್ತಿಪಟುಗಳು ಸೆಂಟ್ರಲ್ ದೆಹಲಿಯ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಆಗಿಲ್ಲ ಎಂದು ಕುಸ್ತಿಪಟುಗಳು ಅಸಮಾಧಾನ ಹೊರಹಾಕಿದ್ದಾರೆ.
ಈ ವಿಷಯದ ಬಗ್ಗೆ ಸರ್ಕಾರದ ಸಮಿತಿಯ ವರದಿಯನ್ನು ಇನ್ನೂ ಸಾರ್ವಜನಿಕಗೊಳಿಸದಿರುವುದು ಹತಾಶೆಯಾಗಿದೆ. ಮಹಿಳಾ ಕುಸ್ತಿಪಟುಗಳ ಹೇಳಿಕೆಯನ್ನು ದಾಖಲಿಸಿರುವ ವರದಿಯು ಸಾರ್ವಜನಿಕವಾಗಬೇಕೆಂದು ನಾವು ಬಯಸುತ್ತೇವೆ. ಇದು ಸೂಕ್ಷ್ಮ ವಿಷಯವಾಗಿದೆ. ದೂರುದಾರರಲ್ಲಿ ಒಬ್ಬರು ಅಪ್ರಾಪ್ತ ಬಾಲಕಿ. ದೂರುದಾರರ ಹೆಸರುಗಳನ್ನು ಸೋರಿಕೆ ಮಾಡಬಾರದು ಎಂದು ಕುಸ್ತಿಪಟು ಸಾಕ್ಷಿ ಮಲಿಕ್ ಹೇಳಿದ್ದಾರೆ. ಬ್ರಿಜ್ಭೂಷಣ್ ಅವರನ್ನು ಬಂಧಿಸುವವರೆಗೂ ನಾವು ಇಲ್ಲಿಂದ ಹೊರಡುವುದಿಲ್ಲ ಎಂದು ಕುಸ್ತಿಪಟು ಬಜರಂಗ್ ಪುನಿಯಾ ಹೇಳಿದ್ದಾರೆ. ಪ್ರಕರಣದ ವಿಚಾರವಾಗಿ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ವಿನೇಶ್ ಫೋಗಟ್ ಬೇಸರ ವ್ಯಕ್ತಪಡಿಸಿದ್ದಾರೆ.
ನ್ಯಾಯ ಸಿಗುವವರೆಗೂ ನಮಗೆ ಇಲ್ಲೇ ಊಟ, ಇಲ್ಲೇ ನಿದ್ರೆ. ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಸಂಪರ್ಕಿಸಲು ಮೂರು ತಿಂಗಳಿನಿಂದ ಪ್ರಯತ್ನಿಸುತ್ತಿದ್ದೇವೆ. ಸಮಿತಿಯ ಸದಸ್ಯರು ನಮಗೆ ಪ್ರತಿಕ್ರಿಯಿಸುತ್ತಿಲ್ಲ. ಕ್ರೀಡಾ ಸಚಿವಾಲಯವೂ ಏನನ್ನೂ ಹೇಳುತ್ತಿಲ್ಲ. ಅವರು ನಮ್ಮ ಕರೆಗಳನ್ನು ಸಹ ಸ್ವೀಕರಿಸುತ್ತಿಲ್ಲ. ನಾವು ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದೇವೆ. ನಮ್ಮ ವೃತ್ತಿಜೀವನವನ್ನು ಪಣಕ್ಕಿಟ್ಟಿದ್ದೇವೆ ಎಂದು ವಿನೇಶ್ ಫೋಗಟ್ ನೊಂದು ನುಡಿದಿದ್ದಾರೆ.
ಕ್ರೀಡಾ ಸಚಿವಾಲಯವು (Sports Ministry) ಜನವರಿ 23 ರಂದು ಬಾಕ್ಸರ್ ಮೇರಿ ಕೋಮ್ ನೇತೃತ್ವದ ಐವರು ಸದಸ್ಯರ ಉಸ್ತುವಾರಿ ಸಮಿತಿಯನ್ನು ರಚಿಸಿತ್ತು. ಒಂದು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಹೇಳಿತ್ತು. ವರದಿ ಸಲ್ಲಿಕೆಗೆ ಎರಡು ವಾರಗಳ ಗಡುವು ನೀಡಿತ್ತು. ಪ್ರತಿಭಟಿಸಿದ್ದ ಕುಸ್ತಿಪಟುಗಳ ಒತ್ತಾಯದ ಮೇರೆಗೆ ಆರನೇ ಸದಸ್ಯೆಯಾಗಿ ಬಬಿತಾ ಫೋಗಟ್ ಅವರನ್ನು ತನಿಖಾ ಸಮಿತಿಗೆ ಸೇರಿಸಿತ್ತು.
ಸಮಿತಿಯು ತನ್ನ ವರದಿಯನ್ನು ಏಪ್ರಿಲ್ ಮೊದಲ ವಾರದಲ್ಲಿ ಸಲ್ಲಿಸಿದೆ. ಆದರೆ ಸಚಿವಾಲಯವು ಆ ವರದಿಯನ್ನು ಇನ್ನೂ ಸಾರ್ವಜನಿಕಗೊಳಿಸಿಲ್ಲ. ಆದಾಗ್ಯೂ, ಹಲವಾರು ವಿಚಾರಣೆಗಳ ನಂತರ ಕುಸ್ತಿಪಟುಗಳು WFI ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ತರಬೇತುದಾರರು ವರ್ಷಗಳಿಂದ ಮಹಿಳಾ ಕುಸ್ತಿಪಟುಗಳಿಗೆ (Woman Wrestler) ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ.
WFI ಅಧಿಕಾರಿಗಳು ಅಥ್ಲೀಟ್ಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಭಾರತದ ಇತರ ಅಗ್ರ ಕುಸ್ತಿಪಟುಗಳೊಂದಿಗೆ ನವದೆಹಲಿಯ ಜಂತರ್ ಮಂತರ್ನಲ್ಲಿ ವಿನೇಶ್ ಫೋಗಟ್ ಈ ವರ್ಷದ ಆರಂಭದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಡಬ್ಲ್ಯುಎಫ್ಐ ಅಧ್ಯಕ್ಷರನ್ನು ತೆಗೆದುಹಾಕುವವರೆಗೆ ನಾವು ಯಾವುದೇ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸಹ ಘೋಷಿಸಿದ್ದರು. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಕೇಂದ್ರ ಕ್ರೀಡಾ ಸಚಿವರು ಪ್ರತಿಭಟನಾನಿರತ ಕುಸ್ತಿಪಟುಗಳೊಂದಿಗೆ ಮಾತುಕತೆ ನಡೆಸಿ, ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅದಾದ ಬಳಿಕ ಕುಸ್ತಿಪಟುಗಳು ಪ್ರತಿಭಟನೆ ಕೈಬಿಟ್ಟಿದ್ದರು.