ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bangalore) ಮಹಿಳೆಯೊಂದಗೆ ಅನೈತಿಕ ಸಂಬಂಧ(Immoral relationship) ಮುಂದುವರೆಸುವಂತೆ ಒತ್ತಾಯಿಸಿ ಅಶ್ಲೀಲ ಫೋಟೋ ಹಾಗೂ ವೀಡಿಯೋವನ್ನು ತೋರಿಸಿ ಬೆದರಿಸುತ್ತಿದ್ದ ವ್ಯಕ್ತಿಯನ್ನು ಮಾತನಾಡುವುದಾಗಿ ಕರೆಸಿ ಆರ್ಎಂಸಿ ಯಾರ್ಡ್ ಮಾರುಕಟ್ಟೆಯ ಬಳಿ ಚಾಕು ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಅನೈತಿಕ ಸಂಬಂಧ ಮುಂದುವರೆಸಲು ಹೋಗಿ ಕೊಲೆಯಾದ ವ್ಯಕ್ತಿಯನ್ನು (Umapathi)ಉಮಾಪತಿ (47) ಎಂದು ಗುರುತಿಸಲಾಗಿದೆ. ಈತನು ಹಲವು ದಿನಗಳಿಂದ ಬೆಂಗಳೂರಿನ(Bangalore) ಮಹಿಳೆಯೊಂದಿಗೆ ಅನೈತಿಕವಾಗಿ ಸಂಬಂಧವನ್ನು ಹೊಂದಿದ್ದನು.
ಆದರೆ, ಆತನ ಸಂಬಂಧದ ವಿಚಾರ ಮನೆಯವರಿಗೆ ಗೊತ್ತಾಗಿದ್ದು, ಇನ್ನುಮುಂದೆ ನಮ್ಮ ಸಂಬಂಧವನ್ನು ಬಿಟ್ಟುಬಿಡೋಣ ಎಂದು ಹೇಳಿದ್ದಾಳೆ. ಆದರೆ, ಇದಕ್ಕೊಪ್ಪದ ಅಸಾಮಿ ಮಹಿಳೆಗೆ(women) ಪದೇ ಪದೇ ಬೇಡಿಕೆಯಿಟ್ಟು, ಆಕೆಯನ್ನು ಪುಸಲಾಯಿಸಿ ತನ್ನ ಚಪಲವನ್ನು ತೀರಿಸಿಕೊಂಡಿದ್ದಾನೆ. ಜೊತೆಗೆ, ಈಕೆ ತನ್ನನ್ನು ಬಿಟ್ಟು ಹೋಗುವ ನಿರ್ಧಾರ ಮಾಡಿದ್ದಾಳೆಂಬ ನಿರ್ಧಾರ ತಿಳಿಯುತ್ತಿದ್ದಂತೆ ಆಕೆಯೊಂದಿಗೆ ತಾನಿರುವ ಬಗ್ಗೆ ಫೋಟೋ ಹಾಗೂ ವೀಡಿಯೋ ಮಾಡಿಕೊಂಡಿದ್ದಾನೆ.
ಮಹಿಳೆಗೆ ಸಂಬಂಧ ಮುಂದುವರಿಸಲು ಬೆದರಿಕೆ: ಇನ್ನು ಉಮಾಪತಿಯ ಸಹವಾಸ ಬೇಡವೆಂದರೂ ಪದೇ ಪದೆ ಸಂಬಂಧಕ್ಕೆ ಬೇಡಿಕೆ ಇಡುತ್ತಿದ್ದವನ ವರಸೆ ಇತ್ತೀಚೆಗೆ ಬದಲಾಗಿತ್ತು. ನೀನು ನನ್ನೊಂದಿಗೆ ಕಳೆದ ಖಾಸಗಿ ಕ್ಷಣಗಳ ಫೋಟೋಗಳು ಮತ್ತು ವೀಡಿಯೋಗಳು ನನ್ನ ಬಳಿಯಿದ್ದು, ಅದನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಡುವುದಾಗಿ ಬೆದರಿಕೆ ಒಡ್ಡಿದ್ದಾನೆ. ಇದರಿಂದ ಹೆದರಿದ ಮಹಿಳೆ ತನ್ನ ಸಂಸಾರ ಹಾಳಾಗುವ ಹಾಗೂ ತನ್ನ ಮರ್ಯಾದೆ ಹಾಳಾಗುವುದು ಎಂದು ಆತನೊಂದಿಗೆ ಇನ್ನೂ ಕೆಲವು ಬಾರಿ ಸಂಬಂಧಕ್ಕೆ ಒಪ್ಪಿಕೊಂಡಿದ್ದಾರೆ. ಆದರೆ, ಇಷ್ಟಕ್ಕೇ ಬಿಡದ ಕಾಮುಕ ಉಮಾಪತಿ ಮೊದಲು ಮನವಿ ಮಾಡುತ್ತಿದ್ದವನು, ಈಗ ಬೆದರಿಕೆ ಹಾಕಿ ಸ್ವೇಚ್ಛಾಚಾರವಾಗಿ ತನ್ನನ್ನು ಬಳಸಿಕೊಳ್ಳುತ್ತಿದ್ದಾನೆ ಎಂದು ಮಹಿಳೆ ಕೋಪಗೊಂಡಿದ್ದಾಳೆ.
ಮನೆಯವರಿಗೆ ವಿಚಾರ ತಿಳಿಸಿದ ಮಹಿಳೆ: ಅನೈತಿಕ ಸಂಬಂಧಕ್ಕಾಗಿ ಉಮಾಪತಿ ತನ್ನನ್ನು ಬೆದರಿಕೆ ಹಾಕಿ ಬಳಸಿಕೊಳ್ಳುತ್ತಿದ್ದಾನೆ. ನನ್ನ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣಕ್ಕೆ ಹರಿಬಿಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂಬುದನ್ನು ಮನೆಯವರಿಗೆ ಹೇಳಿದ್ದಾಳೆ. ಇದರಿಂದ ಆಕ್ರೋಶಗೊಂಡ ಮಹಿಳೆಯ ಮನೆಯವರು ಆತನನ್ನು ಮಾತನಾಡುವುದಾಗಿ ಆರ್ಎಂಸಿ ಯಾರ್ಡ್ ಬಳಿಗೆ ಕರೆಸಿಕೊಂಡಿದ್ದಾರೆ. ಈ ವೇಳೆ ವೀಡಿಯೋ, ಫೋಟೋ ಡಿಲೀಟ್ ಮಾಡುವಂತೆ ಹಾಗೂ ಆಕೆಯ ಸಹವಾಸಕ್ಕೆ ಬರದಂತೆ ಬುದ್ಧಿಯನ್ನೂ ಹೇಳಿದ್ದಾರೆ.
ಮಹಿಳೆ ಕಡೆಯವರಿಂದ ಚಾಕು ಇರಿದು ಕೊಲೆ: ಆರ್ಎಂಸಿ ಯಾರ್ಡ್ ಬಳಿ ಬಂದಿದ್ದ ಮಹಿಳೆಯ ಕಡೆಯವರು ಹಾಗೂ ಉಮಾಪತಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮಹಿಳೆಯ ಎಲ್ಲ ಫೋಟೋ, ವಿಡಿಯೋ ಡಿಲೀಟ್ ಮಾಡಲು ಒಪ್ಪದ ಆತನಿಗೆ ಥಳಿಸಿದ್ದಾರೆ. ಆಗಲೂ ಅವರ ಮಾತನ್ನು ಕೇಳದ ಉಮಾಪತಿಗೆ ಚಾಕುವಿನಿಂದ ಚುಚ್ಚಿದ್ದಾರೆ. ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವ ಉಂಟಾಗಿ ನರಳಾಡುತ್ತಿದ್ದ ಉಮಾಪತಿ ರಕ್ತದ ಮಡುವಿನಲ್ಲಿಯೇ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಈ ಪ್ರಕರಣಕ್ಕೆ ಕುರಿತಂತೆ ಇಬ್ಬರು ಕೊಲೆ ಆರೋಪಿಗಳಾದ ನರಸಿಂಹಯ್ಯ ಹಾಗೂ ಸುನೀಲ ಎಂಬುವವರನ್ನು ಆರ್ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.