ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿರುವ ಖ್ಯಾತ ಹಿರಿಯ ನಟ ಶರತ್ ಬಾಬು ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶರತ್ ಬಾಬು ಅವರನ್ನು ಎರಡು ದಿನಗಳ ಹಿಂದೆ ಹೈದರಾಬಾದ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಇದೀಗ ಶರತ್ ಬಾಬು ಅವರ ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾಗಿದ್ದು ಹಿರಿಯ ವೈದ್ಯರಿಂದ ಚಿಕಿತ್ಸೆ ಮುಂದುವರೆದಿದೆ.
ಸದ್ಯ ಶರತ್ ಬಾಬು ಅವರಿಗೆ ವೆಂಟಿಲೇಟರ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಶರತ್ ಬಾಬು ಆಪ್ತ ಮೂಲಗಳು ತಿಳಿಸಿವೆ. ಹೈದರಾಬಾದ್ ನ ಎಐಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೇ ಸಾಮಾನ್ಯ ವಾರ್ಡ್ ಗೆ ಸ್ಥಳಾಂತರ ಮಾಡುವ ಕುರಿತು ವೈದ್ಯರು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದರು.
1973ರಲ್ಲಿ ತೆರೆಕಂಡ ತೆಲುಗಿನ ರಾಮ ರಾಜ್ಯಂ ಚಿತ್ರದ ಮೂಲಕ ಸಿನಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟ ಶರತ್ ಬಾಬು ತಮಿಳು, ಮಲಯಾಳಂ, ಕನ್ನಡ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 2018ರ ಬಳಿಕ ಸಿನಿಮಾಗಳಿಂದ ದೂರವಿರುವ ಶರತ್ ಬಾಬು ಆಗೊಂದು ಈಗೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.