ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ದಂತಕತೆ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಸೋಮವಾರ 50ನೇ ಜನುಮ ದಿನವನ್ನು ಆಚರಿಸಿಕೊಂಡಿದ್ದಾರೆ. ಕ್ರಿಕೆಟ್ ದೇವವ ಹುಟ್ಟು ಹಬ್ಬಕ್ಕೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗರು, ಹಾಲಿ ಕ್ರಿಕೆಟಿಗರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶುಭ ಹಾರೈಸಿದ್ದಾರೆ.
ಶನಿವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ತಂಡ ಸಚಿನ್ ತೆಂಡೂಲ್ಕರ್ ಅವರ ಹುಟ್ಟು ಹಬ್ಬವನ್ನು ಆಚರಿಸಿತ್ತು. ಈ ವೇಳೆ ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ ಅವರು ಸಚಿನ್ ತೆಂಡೂಲ್ಕರ್ ಅವರನ್ನು ಸಂದರ್ಶನ ಮಾಡಿದ್ದರು.
“ಇದು ನನ್ನ ಜೀವನದ ಅತ್ಯಂತ ನಿಧಾನಗತಿಯ ಅರ್ಧಶತಕವಾಗಿದೆ. ಆದರೆ, ಇದು ಅತ್ಯಂತ ತೃಪ್ತಿಕರ ಮತ್ತು ಆಸಕ್ತಿದಾಯಕವಾಗಿದೆ,” ಎಂದು ಸಂದರ್ಶನದಲ್ಲಿ ಸಚಿನ್ ತೆಂಡೂಲ್ಕರ್ ಹೇಳಿದ್ದರು. 2013ರಲ್ಲಿ ಮುಂಬೈ ಇಂಡಿಯನ್ಸ್ ಪರ ಸಚಿನ್ ತೆಂಡೂಲ್ಕರ್ ಕೊನೆಯ ಐಪಿಎಲ್ ಪಂದ್ಯವಾಡಿದ್ದರು. ಅಂದಿನಿಂದ ಇಲ್ಲಿಯವರೆಗೂ ಮುಂಬೈ ಇಂಡಿಯನ್ಸ್ಗೆ ಮೆಂಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊಚ್ಚಿ ಟಸ್ಕರ್ಸ್ ವಿರುದ್ದದ ಪಂದ್ಯದಲ್ಲಿ ಸಚಿನ್ ಕೇವಲ 66 ಎಸೆತಗಳಲ್ಲಿ ಶತಕ ಸಿಡಿಸಿರುವುದು ಸ್ಮರಣೀಯ.
ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಐಪಿಎಲ್ ವೃತ್ತಿ ಜೀವನದಲ್ಲಿ ಸಚಿನ್ ತೆಂಡೂಲ್ಕರ್ ಅವರು ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಇವುಗಳ ಪೈಕಿ ಈ 5 ದಾಖಲೆಗಳನ್ನು ಭವಿಷ್ಯದಲ್ಲಿ ಯಾರಿಂದಲೂ ಮುರಿಯಲು ಸಾಧ್ಯವಿಲ್ಲ. ಈ ಆರು ಪ್ರಮುಖ ದಾಖಲೆಗಳನ್ನು ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
- ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ದಾಖಲೆ:ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ಗಳನ್ನು ಕಲೆ ಹಾಕಿದ ಬ್ಯಾಟ್ಸ್ಮನ್ ಎಂಬ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದೆ. ಇವರು ಆಡಿರುವ 664 ಅಂತಾರಾಷ್ಟ್ರೀಯ ಪಂದ್ಯಗಳಿಂದ52ರ ಸರಾಸರಿ ಹಾಗೂ 67.58ರ ಸ್ಟ್ರೈಕ್ ರೇಟ್ನಲ್ಲಿ 34,357 ರನ್ಗಳನ್ನು ಕಲೆ ಹಾಕಿದ್ದಾರೆ. ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಕ್ರಿಯರಾಗಿರುವ ವಿರಾಟ್ ಕೊಹ್ಲಿ 25,322 ರನ್ಗಳ್ನು ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ.
- 264 ಅರ್ಧಶತಕಗಳು:ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್ 264 ಬಾರಿ 50ಕ್ಕೂ ಹೆಚ್ಚಿನ ರನ್ಗಳನ್ನು ಗಳಿಸಿದ್ದಾರೆ. ವಿರಾಟ್ ಕೊಹ್ಲಿ 205 ಬಾರಿ 50ಕ್ಕೂ ಹೆಚ್ಚಿನ ರನ್ಗಳನ್ನು ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಸಕ್ರಿಯ ಕ್ರಿಕೆಟಿಗರ ಪೈಕಿ ಸಚಿನ್ ದಾಖಲೆ ಮುರಿಯುವ ಅವಕಾಶ ವಿರಾಟ್ ಕೊಹ್ಲಿಗೆ ಇದೆ. ಆದರೆ, ಇದು ಕಷ್ಟ ಸಾಧ್ಯ.
- 200 ಟೆಸ್ಟ್ ಪಂದ್ಯಗಳು: ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ 200 ಪಂದ್ಯಗಳನ್ನು ಆಡಿದ ಮೊದಲ ಕ್ರಿಕೆಟಿಗ ಎಂಬ ದಾಖಲೆ ಕೂಡ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದೆ. ಇಂಗ್ಲೆಂಡ್ ತಂಡದ 41ರ ಪ್ರಾಯದ ಜೇಮ್ಸ್ ಆಂಡರ್ಸನ್ ಅವರು 179 ಪಂದ್ಯಗಳ ಮೂಲಕ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
- 30 ಸಾವಿರ ರನ್ಸ್, 200 ವಿಕೆಟ್ಗಳು: ಸಚಿನ್ ತೆಂಡೂಲ್ಕರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ರನ್ ಹೊಳೆ ಹರಿಸುವ ಜೊತೆಗೆ ಬೌಲಿಂಗ್ನಲ್ಲಿ 200 ವಿಕೆಟ್ಗಳನ್ನು ಕಬಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 30000 ರನ್ಗಳ ಜೊತೆಗೆ ಬೌಲಿಂಗ್ನಲ್ಲಿ 200 ವಿಕೆಟ್ಗಳನ್ನು ಪಡೆದಿದ್ದಾರೆ. ಆ ಮೂಲಕ ವಿಶೇಷ ದಾಖಲೆ ಬರೆದಿದ್ದಾರೆ.
- 463 ಏಕದಿನ ಪಂದ್ಯಗಳು: ಸಚಿನ್ ತೆಂಡೂಲ್ಕರ್ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ 463 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಸಕ್ರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿ 274 ಪಂದ್ಯಗಳ ಮೂಲಕ ಕ್ರಿಕೆಟ್ ದೇವರ ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ.
- 100 ಶತಕಗಳ ದಾಖಲೆ: ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಶತಕಗಳ ದಾಖಲೆ ಬರೆದಿದ್ದಾರೆ. ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ 75 ಶತಕಗಳನ್ನು ಸಿಡಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಸಚಿನ್ ದಾಖಲೆ ಮುರಿಯಲು ಕೊಹ್ಲಿಗೆ ಇನ್ನೂ 26 ಶತಕಗಳು ಅಗತ್ಯವಿದೆ.