ಬೆಂಗಳೂರು: ಸುಲಭವಾಗಿ ಹಣ ಸಂಪಾದನೆ ಮಾಡಲು ಬಾಡಿ ಬಿಲ್ಡರ್ ಸೇರಿ ಇಬ್ಬರು ಆರೋಪಿಗಳು ರಾಜಧಾನಿ (Bangalore) ಬೆಂಗಳೂರಿನಲ್ಲಿ ಸರಗಳ್ಳತನದ ಹಾದಿ ಹಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಲಭ್ಯವಾಗಿದೆ. ಸೈಯ್ಯದ್ ಬಾಷಾ ಹಾಗೂ ಸಹಚರ ಶೇಖ್ ಆಯೂಬ್ ಬಂಧಿತ ಆರೋಪಿಗಳು. ಆಂಧ್ರದ ಕಡಪ(Kadapa of Andhra) ಮೂಲದ ಸೈಯ್ಯದ್ ಭಾಷಾ, ದೇಹದಾರ್ಡ್ಯ ಸ್ಪರ್ಧೆಗಳಲ್ಲಿ ಭಾಗಿಯಾಗಿ ಮಿಸ್ಟರ್ ಆಂಧ್ರ ಎಂದು ಪಟ್ಟಗಿಟ್ಟಿಸಿಕೊಂಡಿದ್ದ.
ಸುಲಭವಾಗಿ ಹಣ ಸಂಪಾದನೆ ಮಾಡಲು ಅಡ್ಡದಾರಿ ತುಳಿದ ಅಪರಾಧ ಲೋಕದ ಪಾತಕಿಗಳ ಸಂಪರ್ಕ ಬೆಳೆಸಿಕೊಂಡು ನಿರಂತರ ವಾಗಿ ಸರಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ. ಹೀಗಾಗಿ ಸ್ಥಳೀಯ ಪೊಲೀಸರು(Local Police) ಬಂಧಿಸಿ ಜೈಲಿಗಟ್ಟಿದ್ದರು. ಸೆರೆಮನೆಯಲ್ಲಿರುವಾಗ ಕೈದಿಯೊಬ್ಬ ಬೆಂಗಳೂರಿನಲ್ಲಿ ಸುಲಭವಾಗಿ ಕಳ್ಳತನ ಮಾಡಬಹುದು ಎಂದು ಸಲಹೆ ನೀಡಿದ್ದ. ಇದರಂತೆ ಜಾಮೀನು ಪಡೆದು ಹೊರಬಂದು ಬೆಂಗಳೂರಿಗೆ (Bangalore) ಬಂದಿದ್ದ. ಆರೋಪಿ ಗಿರಿನಗರ ಹಾಗೂ ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸರಗಳ್ಳತನ ಮಾಡುತ್ತಿದ್ದ. ರಾಜಧಾನಿಗೆ ಬಂದು ಕದ್ದ ಬೈಕ್ನಲ್ಲಿ ಸರಗಳ್ಳತನ( Theft) ಮಾಡಲು ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯನ್ನೇ ಟಾರ್ಗೆಟ್ ಮಾಡಿಕೊಂಡಿದ್ದರು.
ಒಂಟಿಯಾಗಿ ಓಡಾಡುವ ವೃದ್ದೆಯರು ಹಾಗೂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ. ಕೃತ್ಯವೆಸಗಿದ ಬಳಿಕ ಬೆಂಗಳೂರು ತೊರೆಯದೇ ಠಾಣಾ ವ್ಯಾಪ್ತಿಯಲ್ಲಿ ಓಡಾಡಿಕೊಂಡಿದ್ದರು. ಸ್ಥಳೀಯ ಪ್ರದೇಶಗಳಲ್ಲಿ ಓಡಾಡಿಕೊಂಡಿದ್ದರೆ ಪೊಲೀಸರಿಗೆ ನಾವು ಸಿಗುವುದಿಲ್ಲ ಎಂದು ಖದೀಮರು ಭಾವಿಸಿಕೊಂಡಿದ್ದರು. ಬಂಧಿಸಲು ಪೊಲೀಸರಿಗೆ ಸಹಾಯವಾಗಲಿದೆ ಎಂದು ಅರಿತು ಆರೋಪಿಗಳು ಮೊಬೈಲ್ ಬಳಸುತ್ತಿರಲಿಲ್ಲ ಎಂದು ಪೊಲೀಸರು ( Girinagar Police)ತಿಳಿಸಿದ್ದಾರೆ. ಆದರೆ, ಕಳ್ಳರು ಚಾಪೆ ಕೆಳಗೆ ತೂರಿದರೆ, ಪೊಲೀಸರು ಇಲ್ಲಿ ರಂಗೋಲಿ ಕೆಳಗೆ ತೂರಿ ಸರಗಳ್ಳರನ್ನು ಸೆರೆ ಹಿಡಿದಿದ್ದಾರೆ.