ಬೆಂಗಳೂರು: ಸಂಸದ ಡಿಕೆ ಸುರೇಶ್ (DK Suresh) ಸಮ್ಮುಖದಲ್ಲಿ ಹಲವು ಜೆಡಿಎಸ್ ಮುಖಂಡರು, ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ನಾಗರಬಾವಿ ಯಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಗಿರೀಶ್ಗೌಡ, ಜೆಡಿಎಸ್ ಬೆಂಗಳೂರು ನಗರ ಜಿಲ್ಲಾ ಘಟಕದ ಹಿರಿಯ ಉಪಾಧ್ಯಕ್ಷರಾದ ಶಾಂತರಾಜು, ರಂಗೇಗೌಡ ಸೇರಿದಂತೆ ನೂರಾರು ಮಂದಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಈ ವೇಳೆ ಪಕ್ಷದ ಶಾಲು ಹೊದಿಸಿ, ಡಿಕೆ ಸುರೇಶ್ ಅವರು ಬರಮಾಡಿಕೊಂಡು ಶುಭ ಹಾರೈಸಿದರು.
ಬಳಿಕ ಮಾತನಾಡಿದ ಡಿಕೆ ಸುರೇಶ್, ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ತೊಲಗದಿದ್ದರೆ ಜನರಿಗೆ ನೆಮ್ಮದಿ ಇರುವುದಿಲ್ಲ. ಬಿಜೆಪಿ ಬಡವರು, ಮಧ್ಯಮವರ್ಗ, ರೈತರು, ಕಾರ್ಮಿಕರ ಬದುಕನ್ನು ಕಸಿದುಗೊಂಡಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಅನ್ನಭಾಗ್ಯ ಯೋಜನೆಯಡಿ 7 ಕೆ.ಜಿ ಅಕ್ಕಿ ನೀಡುತ್ತಿದ್ದೇವು. ಈಗ ಬಿಜೆಪಿ 5 ಕೇಜಿ ಅಕ್ಕಿಯನ್ನು ಮಾತ್ರ ಕೊಡುತ್ತಿದೆ. ತೊಗರಿಬೇಳೆ 180 ರು. ಕಡಲೆಬೀಜ 180 ರು. ಅಡುಗೆ ಅನಿಲದ ಬೆಲೆ 1150ಕ್ಕೆ ಏರಿಕೆಯಾಗಿದೆ. ಪೆಟ್ರೋಲ್ ದರ 110 ರು. ಮತ್ತು ಡಿಸೇಲ್ 95 ರು.ಗಳಿಗಿಂತ ಹೆಚ್ಚಾಗಿದೆ. ಮತ್ತೊಮ್ಮೆ ಬಿಜೆಪಿ ಬಂದರೆ ಈಗಿರುವ ಬೆಲೆಗಿಂತ ಎರಡುಪಟ್ಟು ಜಾಸ್ತಿಯಾಗಲಿದೆ ಎಂದು ಎಚ್ಚರಿಸಿದರು.