ಯಾದಗಿರಿ: ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದಂತೆ, ಚುನಾವಣಾ (Election) ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ಆರಂಭಿಸಿವೆ.
ಗಿರಿನಾಡು ಯಾದಗಿರಿ (Yadgiri) ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಮೂರೂ ಪಕ್ಷಗಳ ಅಭ್ಯರ್ಥಿಗಳು ಗೆಲುವಿನ ರಣೋತ್ಸಾಹದಲ್ಲಿದ್ದಾರೆ. ಆದರೆ ಈ ಬಾರಿ ಮತ್ತೊಮ್ಮೆ ಸರ್ಕಾರ ರಚಿಸುವ ಭರವಸೆಯಲ್ಲಿರುವ ಬಿಜೆಪಿ (BJP) ನಾಯಕರು ರೂಟ್ ಮ್ಯಾಪ್ ಮೂಲಕ ಪ್ರಚಾರ ಆರಂಭಿಸಿದ್ದಾರೆ. ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಪ್ರಚಾರ ನಡೆಸುತ್ತಿರುವ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಇಂದು (ಮಂಗಳವಾರ) ಯಾದಗಿರಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ, ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ್ (Venkatreddy Mudnal) ಪರ ಭರ್ಜರಿ ರೋಡ್ ಶೋ (Road Show) ನಡೆಸಿ, ಮತಯಾಚನೆ ಮಾಡಲಿದ್ದಾರೆ.
ಸಂಜೆ 4:20ಕ್ಕೆ ಯಾದಗಿರಿ ನಗರಕ್ಕೆ ಆಗಮಿಸಲಿರುವ ಅಮಿತ್ ಶಾ, ಯಾದಗಿರಿ ನಗರದ ಸರ್ಕಾರಿ ಡಿಗ್ರಿ ಕಾಲೇಜು ಬಳಿಯಿಂದ ಶಾಸ್ತ್ರೀ ಸರ್ಕಲ್ವರೆಗೂ ರೋಡ್ ಶೋ ನಡೆಸಲಿದ್ದಾರೆ. 4:20ರಿಂದ 5:30ರವರೆಗೂ ರೋಡ್ ಶೋ ನಡೆಯಲಿದೆ. ರೋಡ್ ಶೋನಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆಯಿದೆ. ರೋಡ್ ಶೋ ಹಿನ್ನಲೆ ಪೊಲೀಸರಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜಿಲ್ಲಾ ಸಶಸ್ತ್ರ ಪಡೆ, ಪ್ಯಾರಾ ಮಿಲಿಟರಿ ಫೋರ್ಸ್ ಜೊತೆಗೆ ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೇ ಐವರು ಡಿವೈಎಸ್ಪಿ ಸೇರಿದಂತೆ 50ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ. ಡ್ರೋನ್ ಕಣ್ಗಾವಲಿನಲ್ಲಿ ರೋಡ್ ಶೋ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಮಾಡಲಾಗಿದೆ. ರೋಡ್ ಶೋ ನಡೆಯಲಿರುವ ರಸ್ತೆಯ ಎರಡೂ ಬದಿ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ.
ಅಮಿತ್ ಶಾ ಆಗಮನದಿಂದ ಜಿಲ್ಲೆಯಲ್ಲಿದ್ದ ಬಿಜೆಪಿ ಬಂಡಾಯ ಶಮನಕ್ಕೆ ಟಾನಿಕ್ ನೀಡಿದಂತಾಗಿದೆ. ಯಾಕೆಂದರೆ ಹಾಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ಗೆ ಟಿಕೆಟ್ ನೀಡದಂತೆ ಆರು ಜನ ಆಕಾಂಕ್ಷಿಗಳು ದೆಹಲಿ (Delhi) ಅಂಗಳ ತಲುಪಿದ್ದರು. ವಿರೋಧದ ನಡುವೆಯೂ ಹೈಕಮಾಂಡ್ ಹಾಲಿ ಶಾಸಕರಿಗೆ ಟಿಕೆಟ್ ನೀಡಿತ್ತು. ಆದರೆ ಇದೀಗ ಅಮಿತ್ ಶಾ ಆಗಮನದಿಂದ ಬಂಡಾಯ ಶಮನ ಆಗೋದು ಗ್ಯಾರಂಟಿ ಎನ್ನಲಾಗುತ್ತಿದೆ.