ಮಂಡ್ಯ :- ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಮಂಡ್ಯ ಜಿಲ್ಲೆಗೆ ಆಗಮಿಸುತ್ತಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಯಾವುದೇ ಕೋಮು ದಳ್ಳುರಿ ಸೃಷ್ಟಿಸುವಂತ ಹೇಳಿಕೆ ನೀಡಬೇಡಿ ಎಂದು ಕೆಪಿಸಿಸಿ ವಕ್ತಾರ ಟಿ.ಎಸ್.ಸತ್ಯಾನಂದ ಹೇಳಿದರು. ಮದ್ದೂರು ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಭೈರವೈಕ್ಯ ಬಾಲ ಗಂಗಾಧರನಾಥ ಸ್ವಾಮಿಗಳ ಪುಣ್ಯ ನೆಲವಾಗಿದೆ ಅವರು ನಾಥ ಪರಂಪರೆಯ ಭದ್ರ ಬುನಾದಿ ಹಾಕಿರುವ ಜಿಲ್ಲೆಯಾಗಿದೆ. ಇಂತಹ ಸ್ಥಳದಲ್ಲಿ ಯೋಗಿ ಆದಿತ್ಯನಾಥ್ ಕೋಮುದ್ವೇಷ ಹುಟ್ಟು ಹಾಕುವ ಹೇಳಿಕೆ ನೀಡಬಾರದು ಎಂದು ಮನವಿ ಮಾಡಿದರು.
ಯೋಗಿ ಆದಿತ್ಯನಾಥ್ ಅವರಿಗೆಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ನಮ್ಮ ಸ್ವಾಗತವಿದೆ. ಆದರೆ, ಕೋಮು ಗಲಭೆ ಸೃಷ್ಟಿಸುವ ಕಾರ್ಯಕ್ಕೆ ನಮ್ಮ ವಿರೋಧವಿದೆ ಎಂದು ಸತ್ಯಾನಂದ ಎಚ್ಚರಿಸಿದರು. ಜೆಡಿಎಸ್ ಅಭ್ಯರ್ಥಿ ಶಾಸಕ ಡಿ.ಸಿ.ತಮ್ಮಣ್ಣ ಕುತಂತ್ರ ರಾಜಕಾರಣವನ್ನು ಮಟ್ಟ ಹಾಕುವ ಉದ್ದೇಶದಿಂದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಕೆ.ಎಂ.ಉದಯ್ ಅವರನ್ನು ಕಣಕ್ಕಿಳಿಸಲಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸಹೋದರ ದಿ.ಎಸ್.ಎಂ.ಶಂಕರ್ ಪುತ್ರ ಕೆಪಿಸಿಸಿ ಸದಸ್ಯ ಎಸ್.ಗುರುಚರಣ್ ಅವರನ್ನು ಮದ್ದೂರು ವಿಧಾನ ಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ದರು ಆದರೆ, ಈ ಹಿಂದೆ ಗುರುಚರಣ್ ಅವರಿಗೆ ಶಾಸಕ ಡಿ.ಸಿ.ತಮ್ಮಣ್ಣರ ಕುತಂತ್ರದ ರಾಜಕಾರಣದ ಅರಿವಿಲ್ಲ ಎಂಬ ಕಾರಣಕ್ಕೆ ಕ್ಷೇತ್ರದ ಅಭ್ಯರ್ಥಿಯನ್ನು ಕೊನೆ ಕ್ಷಣದಲ್ಲಿ ಬದಲಾವಣೆ ಮಾಡುವ ತೀರ್ಮಾನವನ್ನು ಕಾಂಗ್ರೆಸ್ ವರಿಷ್ಠರು ಕೈಗೊಂಡರು ಎಂದರು.
ಮದ್ದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲೇ ಬೇಕೆಂಬ ಉದ್ದೇಶದಿಂದ ತಂತ್ರಗಾರಿಕೆಗೆ ಪ್ರತಿ ತಂತ್ರ ಹೂಡುವ ಸಾಮರ್ಥ್ಯ ಇರುವ ಕಾಂಗ್ರೆ ಸ್ ಅಭ್ಯರ್ಥಿಯನ್ನಾಗಿ ಕೆ.ಎಂ.ಉದಯ್ ಅವರನ್ನು ಕಣಕ್ಕಿಳಿಸಲಾಗಿದೆಯೇ ಹೊರತು ಪಕ್ಷದ ಟಿಕೆಟ್ ಅನ್ನು ಹಣ ಮತ್ತು ಯಾವುದೇ ಆಮಿಷಗಳಿಗೆ ಮಾರಾಟ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಬೆಳೆಸುವಲ್ಲಿ ಗುರುಚರಣ್ ಅವರ ಸೇವೆ ಅಗಾಧವಾಗಿದೆ. ಆತನನ್ನು ಕೈ ಹಿಡಿಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈಗಲೂ ಸಹ ಕಟಿಬದ್ದರಾಗಿದ್ದಾರೆ.
ಗುರುಚರಣ್ ಅವರು ತಮ್ಮ ದುಡುಕಿನ ನಿರ್ಧಾರ ಹಾಗೂ ಬೆಂಬಲಿಗರ ಒತ್ತಾಸೆಗೆ ಬಲಿ ಬಿದ್ದು ಕಾಂಗ್ರೆಸ್ ಪಕ್ಷ ತೊರೆದಿದ್ದಾರೆ ಈಗಲೂ ಸಹ ನಮ್ಮ ಪಕ್ಷದ ವರಿಷ್ಠರು ಮತ್ತು ಜಿಲ್ಲೆಯ ನಾಯಕರಿಗೆ ಅವರ ಮೇಲೆ ಯಾವುದೇ ದ್ವೇಷವಿಲ್ಲ. ಗುರುಚರಣ್ ಯಾವಾಗಲೂ ನಮ್ಮ ಪಕ್ಷದ ನಾಯಕರಾಗಿದ್ದು, ಚುನಾವಣೆ ನಂತರ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಲಿದ್ದಾರೆ ಎಂದು ಸತ್ಯಾನಂದ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿ ಕೆ.ಎಂ.ಉದಯ್, ತಾ.ಪಂ ಮಾಜಿ ಸದಸ್ಯ ತೈಲೂರು ಚಲುವರಾಜು ಮುಖಂಡರಾದ ಸಿ.ಟಿ.ಶಂಕರ್, ರಘು, ಹರೀಶ್, ಮಧು, ತಿಮ್ಮೇಗೌಡ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ.