ಇಸ್ಲಾಮಾಬಾದ್: ಪಾಕಿಸ್ತಾನದ ಸ್ವಾತ್ನ ಭಯೋತ್ಪಾದನಾ ನಿಗ್ರಹ ಕಚೇರಿಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು ಘಟನೆಯಲ್ಲಿ ಕನಿಷ್ಠ 12 ಮಂದಿ ಪೊಲೀಸರು ಮೃತಪಟ್ಟಿದ್ದು. 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸದ್ಯ ಘಟನಾ ಸ್ಥಳದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಖೈಬರ್ ಪುಂಖ್ಯಾ ಪ್ರಾಂತ್ಯದ ಪೊಲೀಸ್ ಮಹಾನಿರೀಕ್ಷಕ ಅಖ್ತರ್ ಹಯಾತ್ ಖಾನ್ ತಿಳಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಭಯೋತ್ಪಾದನಾ ನಿಗ್ರಹ ಇಲಾಖೆ ಡಿಐಜಿ ಖಾಲಿದ್ ಸೊಹೈಲ್, ಪೊಲೀಸ್ ಠಾಣೆಯ ಮೇಲೆ ಯಾವುದೇ ಬಾಂಬ್ ದಾಳಿ ಅಥವಾ ಗುಂಡಿನ ದಾಳಿ ನಡೆದಿಲ್ಲ. ಇದು ಆತ್ಮಹತ್ಯಾ ದಾಳಿಯೂ ಅಲ್ಲ. ಮದ್ದುಗುಂಡುಗಳು ಮತ್ತು ಶೆಲ್ಗಳನ್ನು ಸಂಗ್ರಹಿಸಿದ್ದ ಸ್ಥಳದಲ್ಲಿ ಸ್ಫೋಟ ಸಂಭವಿಸಿದೆಯೇ ಹೊರತಾಗಿ ಪೊಲೀಸ್ ಠಾಣೆಯ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂದಿದ್ದಾರೆ.
ಸ್ಫೋಟಕ್ಕೆ ನಿಖರ ಕಾರಣ ಏನೆಂಬುದರ ಕುರಿತು ತನಿಖೆ ನಡೆಯುತ್ತಿದೆ. ಬಾಂಬ್ ನಿಷ್ಕ್ರಿಯ ದಳಗಳು ಸ್ಥಳಕ್ಕೆ ಧಾವಿಸಿ ತಪಾಸಣೆ ನಡೆಸುತ್ತಿವೆ. ಕುಸಿದ ಕಟ್ಟಡ ಅತ್ಯಂತ ಹಳೆಯದಾಗಿತ್ತು. ಹಾಗಾಗಿ ಸಿಬ್ಬಂದಿಯನ್ನ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಿಟಿಡಿ ಡಿಐಜಿ ತಿಳಿಸಿದ್ದಾರೆ.