ಮಂಡ್ಯ :- ನಾಗಮಂಗಲ ಕ್ಷೇತ್ರದ ಜನತೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಇಬ್ಬರ ದೊಂಬರಾಟವನ್ನು ನೋಡಿ ಸಾಕಪ್ಪಾ ಇವರ ಸಹವಾಸ ಎಂದು ಬೇಸತ್ತು ಬಿಜೆಪಿ ಪಕ್ಷದತ್ತ ಒಲವು ತೋರುತ್ತಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮಂಗಳವಾರ ಹೇಳಿದರು. ನಾಗಮಂಗಲ ವಿಧಾನ ಸಭಾ ಕ್ಷೇತ್ರದ ಕೊಪ್ಪ ಹೋಬಳಿಯ ಕೌಡ್ಲೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಸುಧಾ ಶಿವರಾಮೇಗೌಡ ಪರ ಚುನಾವಣಾ ಪ್ರಚಾರ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾಗಮಂಗಲ ಕ್ಷೇತ್ರದ ಜನತೆ ಬದಲಾವಣೆ ಬಯಸುತ್ತಿದ್ದಾರೆ. ಕ್ಷೇತ್ರದ ಇಬ್ಬರು ನಾಯಕರ ದೊಂಬರಾಟವನ್ನು ಜನತೆ ನೋಡಿ ನೋಡಿ ಸಾಕಷ್ಟು ಬೇಸತ್ತಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಹೀಗಾಗಿ ಈ ಬಾರಿ ಬಿಜೆಪಿ ಅಭ್ಯರ್ಥಿ ಸುಧಾ ಶಿವರಾಮೇಗೌಡ ಅವರನ್ನು ಕೈ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೊಪ್ಪ ಹೋಬಳಿ ಸಾಕಷ್ಟು ಹಿಂದುಳಿದಿದೆ. ಕುಡಿಯುವ ನೀರು, ವಿದ್ಯುತ್, ಆಸ್ಪತ್ರೆ, ರಸ್ತೆ, ಕಾಡು ಪ್ರಾಣಿಗಳು ಕಾಟ ಹೀಗೆ ಹಲವು ಸಮಸ್ಯೆಗಳು ಕ್ಷೇತ್ರದಲ್ಲಿ ತಾಂಡವವಾಡುತ್ತಿವೆ ಇವೆಲ್ಲ ಸಮಸ್ಯೆಗಳಿಗೆ ಮುಕ್ತಿ ದೊರಕಬೇಕೆಂದರೇ ಜನತೆ ಬಿಜೆಪಿ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಬಿಜೆಪಿಗೆ ಬಂಡಾಯ ಅಭ್ಯರ್ಥಿಯಾಗಿರುವ ಫೈಟರ್ ರವಿ ಅವರು ಮತ್ತು ನಾವು ಒಳ್ಳೆಯ ಸ್ನೇಹಿತರಾಗಿದ್ದೇವೆ. ಪಕ್ಷ ಅವರಿಗೆ ಟಿಕೆಟ್ ನೀಡಿದ್ರೆ ನಾವು ಅವರ ಗೆಲುವಿಗೆ ಕೆಲಸ ಮಾಡ್ತಿದ್ದೋ ಆದರೆ, ಹೈಕಮಾಂಡ್ ನಮಗೆ ಟಿಕೆಟ್ ನೀಡಿದೆ ಆಗಾಗಿ ರವಿ ಅವರು ನಮಗೆ ಬೆಂಬಲ ನೀಡಬೇಕು ಮತ್ತು ನಮ್ಮ ಎದುರಾಳಿಗಳನ್ನು ಸದೆ ಬಡಿಯಲು ನಮ್ಮ ಪರ ನಿಲ್ಲಬೇಕೆಂದು ಮನವಿ ಮಾಡಿದರು.
ಕ್ಷೇತ್ರದಲ್ಲಿ ನನ್ನ ಪತಿಯವರು ಮಾಡಿರುವ ಸಮಾಜಮುಖಿ ಹಾಗೂ ರಾಜಕೀಯ ಸೇವೆಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಕ್ಷೇತ್ರದ ಮತದಾರರು ನನ್ನ ಕೈ ಹಿಡಿಯುತ್ತಾರೆ ಎಂಬ ಅಚಲ ನಂಬಿಕೆ ನನಗಿದೆ ಎಂದು ಅಭ್ಯರ್ಥಿ ಸುಧಾ ಶಿವರಾಮೇಗೌಡ ವಿಶ್ವಾಸ ವ್ಯಕ್ತಪಡಿಸಿ ದರು. ಇದೇ ವೇಳೆ ಬಿಜೆಪಿ ಮುಖಂಡ ಚೇತನ್, ರಮೇಶ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ.