ಲಂಡನ್: ಬ್ರಿಟನ್ ನ ಶಾಲೆಗಳಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಇಸ್ಲಾಂಗೆ ಮತಾಂತರ ಆಗುವಂತೆ ಪ್ರಯತ್ನ ಮಾಡಲಾಗುತ್ತಿದೆ. ಮತಾಂತರ ಆಗಿ ಇಲ್ಲವೇ ನರಕಕ್ಕೆ ಹೋಗಿ ಎಂಬ ಬೆದರಿಕೆಯನ್ನೂ ಹಾಕಲಾಗುತ್ತಿದೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಹೆನ್ಸಿ ಜಾಕ್ಸನ್ ಸೊಸೈಟಿ ಎಂಬ ಸ್ಥಳೀಯ ಚಿಂತಕರ ಚಾವಡಿಯೊಂದು ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶಗಳಿವೆ.
ಬ್ರಿಟನ್ನಲ್ಲಿರುವ ಶಾಲೆಗಳಲ್ಲಿ ಹಿಂದೂ ದ್ವೇಷದ ಘಟನೆಗಳು ನಡೆಯುತ್ತಿವೆ. ಒಂದು ಪ್ರಕರಣದಲ್ಲಿ ವಿದ್ಯಾರ್ಥಿಯೊಬ್ಬನ ಮೇಲೆ ಗೋಮಾಂಸ (Beef meat) ಬಿಸಾಡಲಾಗಿದೆ. ಕೆಲವು ಶಾಲೆಗಳಲ್ಲಿ ಹಿಂದೂ ಧರ್ಮದ (Hindu Dharma) ಕುರಿತಾಗಿ ಬೋಧಿಸುವುದನ್ನು ಕೆಲವರು ವಿರೋಧಿಸಿದ್ದು, ಧಾರ್ಮಿಕ ತಾರತಮ್ಯ ಮಾಡುತ್ತಿದ್ದಾರೆ.
ಇತ್ತೀಚಿನ ಸಮೀಕ್ಷೆಯ ಪ್ರಕಾರ ಶೇ.51ರಷ್ಟುಪೋಷಕರು ತಮ್ಮ ಮಕ್ಕಳು ಹಿಂದೂ ದ್ವೇಷಕ್ಕೆ ತುತ್ತಾಗಿರುವುದಾಗಿ ಹೇಳಿದ್ದಾರೆ ಎಂದು ವರದಿ ಬಿಡುಗಡೆ ಮಾಡಿದ ಚಿಂತಕ ಹೆನ್ರಿ ಜಾಕ್ಸನ್ (Henry jackson) ಹೇಳಿದ್ದಾರೆ. ಅಲ್ಲದೆ ಕೆಲ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳಿಗೆ ವಿವಾದಿತ ಧರ್ಮ ಪ್ರಚಾರಕ ಝಾಕೀರ್ ನಾಯ್ಕನ ವಿಡಿಯೋ ನೋಡುವಂತೆ ಬಲವಂತ ಮಾಡಿರುವ ಘಟನೆಗಳೂ ನಡೆದಿವೆ ಎಂದು ಹೇಳಿದ್ದಾರೆ.