ವಾಷಿಂಗ್ಟನ್ : ಅಮೆರಿಕವು 2023ನೇ ಸಾಲಿನಲ್ಲಿ ಭಾರತೀಯರಿಗೆ 10 ಲಕ್ಷಕ್ಕಿಂತಲೂ ಅಧಿಕ ವೀಸಾಗಳನ್ನು ನೀಡುವ ಯೋಜನೆ ಹಾಕಿಕೊಂಡಿದೆ. ಅಲ್ಲದೆ ಶೈಕ್ಷಣಿಕ ಆರಂಭದ ಈ ಸಂದರ್ಭದಲ್ಲಿ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ಬರಲಿರುವ ಭಾರತ ಮೂಲದ ವಿದ್ಯಾರ್ಥಿಗಳಿಗೆ ವೀಸಾವನ್ನು ಖಚಿತಪಡಿಸಲಾ ಗುವುದು ಎಂದು ದಕ್ಷಿಣ ಮತ್ತು ಮಧ್ಯ ಏಷ್ಯಾದ ಅಮೆರಿಕ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು ಭರವಸೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಭಾರತದಿಂದ ಅಮೆರಿಕಕ್ಕೆ ಉದ್ಯೋಗಕ್ಕಾಗಿ ಬರುವ ಜನರ ವೀಸಾಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಎಚ್-1ಬಿ ಮತ್ತು ಎಲ್ ವೀಸಾಗಳು ಭಾರತೀಯ ಐಟಿ ಉದ್ಯೋಗಿಗಳಿಂದ ಹೆಚ್ಚು ಬೇಡಿಕೆಯಲ್ಲಿವೆ’ ಎಂದಿದ್ದಾರೆ.
ಇನ್ನು ಎಚ್-1ಬಿ ವೀಸಾವು ವಲಸೆ ರಹಿತ ವೀಸಾ ಆಗಿದ್ದು, ಇದು ಅಮೆರಿಕದ ಕಂಪನಿಗಳಿಗೆ ತಾಂತ್ರಿಕ ಮತ್ತು ಸೈದ್ಧಾಂತಿಕವಾಗಿ ಅಗತ್ಯವಿರುವ ಉದ್ಯೋಗಗಳಿಗೆ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಸಹಾಯ ಮಾಡುತ್ತದೆ. ಭಾರತ ಮತ್ತು ಚೀನಾಗಳಿಂದ ಪ್ರತಿ ವರ್ಷ 10,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅಲ್ಲಿನ ತಾಂತ್ರಿಕ ಕಂಪನಿಗಳು ಇದನ್ನು ಬಳಸಿಕೊಳ್ಳುತ್ತವೆ.
ನಾವು ಈ ವರ್ಷ 10 ಲಕ್ಷಕ್ಕಿಂತ ಅಧಿಕ ವೀಸಾಗಳನ್ನು ವಿತರಿಸುವ ಹಾದಿಯಲ್ಲಿದ್ದೇವೆ. ಇದು ಹೆಚ್ಚು ವಿದ್ಯಾರ್ಥಿ ಮತ್ತು ವಲಸೆ ವೀಸಾಗಳ ದಾಖಲೆಯಾಗಲಿದೆ. ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ನೀಡುವ ಪ್ರಕ್ರಿಯೆಯನ್ನು ಖಚಿತಪಡಿಸಲಾಗುವುದು. ಅದರಲ್ಲೂ ಬಿ1 (ವ್ಯಾಪಾರ) ಮತ್ತು ಬಿ2 (ಪ್ರವಾಸಿ) ವಿಭಾಗದಡಿಯಲ್ಲಿ ವೀಸಾಗೆ ಮೊದಲ ಬಾರಿ ಅರ್ಜಿ ಸಲ್ಲಿಸುವ ಅರ್ಜಿದಾರ ಕಾಯುವಿಕೆ ಅವಧಿ ದೀರ್ಘವಾಗುತ್ತಿದೆ ಹಾಗೂ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುವುದು. ಅಮೆರಿಕಕ್ಕೆ ಬರುವ ವಿದೇಶಿ ವಿದ್ಯಾರ್ಥಿಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿದೆ. ನಾವು ಉದ್ಯೋಗಿಗಳ ವೀಸಾಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಇದು ಅಮೆರಿಕ ಮತ್ತು ಭಾರತೀಯ ಆರ್ಥಿಕತೆಗಳೆರಡಕ್ಕೂ ಅನುಕೂಲಕರವಾಗಿರಲಿದೆ ಎಂದಿದ್ದಾರೆ.