ಪುನೀತ್ ರಾಜ್ಕುಮಾರ್ ನಟನೆಯ ‘ಅಭಿ’ ಸಿನಿಮಾಗೆ ಮೂಲಕ ಚಂದನವನಕ್ಕೆ ಎಂಟ್ರಿಕೊಟ್ಟ ನಟಿ ರಮ್ಯಾ ಸದ್ಯ ಸ್ಟಾರ್ ನಾಯಕಿಯಾಗಿ ಮಿಂಚುತ್ತಿದ್ದಾರೆ. ಅಭಿ ಸಿನಿಮಾ ತೆರೆಕಂಡ 20 ವರ್ಷ ಕಳೆದಿದ್ದು ಇದೀಗ ಪುನೀತ್ ಜೊತೆಗಿನ ನೆನಪನ್ನು ನಟಿ ರಮ್ಯಾ ಬಿಚ್ಚಿಟ್ಟಿದ್ದಾರೆ.
ಅಭಿ ಸಿನಿಮಾದ ಶೂಟಿಂಗ್ ವೇಳೆ ಅಪ್ಪು ಜೊತೆಗೆ ಕಳೆದ ಸಮಯವನ್ನು ರಮ್ಯಾ ಹಾಕಿದ್ದಾರೆ. 20 ವರ್ಷದ ಹಿಂದಿನ ಫೋಟೋಗಳನ್ನ ಶೇರ್ ಮಾಡುತ್ತಿದ್ದೇನೆ. ನನ್ನ ಮೊದಲ ಸಿನಿಮಾ ಅಭಿ ಚಿತ್ರದ ಫೋಟೋಗಳಿವು. ಮೊದಲ ಫೋಟೋ ಸೈಂಟ್ ಜೋಸೆಫ್ ಕಾಲೇಜ್ನಲ್ಲಿ ತೆಗೆದಿದ್ದು. ‘ಸುಮ್ ಸುಮ್ನೆ’ ಸಾಂಗ್ ಶೂಟಿಂಗ್ ಸಮಯದ್ದು ಎಂದಿದ್ದಾರೆ. 2ನೇ ಫೋಟೋ ಚಿಕ್ಕಮಗಳೂರು ಶೂಟಿಂಗ್ನ ಕೊನೆಯ ದಿನ ಕ್ಲಿಕ್ ಮಾಡಿದ್ದು. ‘ಈ ನನ್ನ ಕಣ್ಣನೆ’ ಹಾಡಿಗಾಗಿ ನಾವು ಶೂಟಿಂಗ್ ಮಾಡಿದ್ದೆವು ಎಂದು ರಮ್ಯಾ ನೆನಪಿಸಿಕೊಂಡಿದ್ದಾರೆ.
ಮೂರನೇ ಫೋಟೋ ಸಿನಿಮಾದ ಪ್ರೈವೇಟ್ ಸ್ಕ್ರೀನಿಂಗ್ ನಂತರ ನನ್ನ ತಂದೆ ಆಯೋಜಿಸಿದ ಪಾರ್ಟಿಯದ್ದು ಎಂದು ಹೇಳಿದ್ದಾರೆ ರಮ್ಯಾ. ಅವರ ಫೋಟೋಗಳು ಅಭಿಮಾನಿಗಳನ್ನೂ ಹಳೆಯ ದಿನಗಳಿಗೆ ಕರೆದೊಯ್ದಿದೆ.ನಾಲ್ಕನೇ ಫೋಟೋ ಸಿನಿಮಾ 100 ದಿನ ತಲುಪಿದ ಸಂಭ್ರಮದ್ದು. ಅಪ್ಪಾಜಿ ನನಗೆ ಮೊಮೆಂಟೋ ಕೊಟ್ಟರು. ಶೂಟಿಂಗ್ನ ಮೊದಲ ದಿನ ನಾನು ನರ್ವಸ್ ಆಗಿ ಜೋರಾಗಿ ಅತ್ತಿದ್ದೆ. ಆದರೆ ಕೊನೆಯ ದಿನ ಆ ತಂಡದೊಂದಿಗೆ ತುಂಬಾ ಅಟ್ಯಾಚ್ಡ್ ಆಗಿ ಅಲ್ಲಿಂದ ಬರುವಾಗ ಅತ್ತಿದ್ದೆ ಎಂದು ರಮ್ಯಾ ನೆನಪಿಸಿಕೊಂಡಿದ್ದಾರೆ.
ನನಗೆ ಅವಕಾಶ ಕೊಟ್ಟ ಡಾ.ರಾಜ್ ಕುಟುಂಬಕ್ಕೆ ಸದಾ ಚಿರಋಣಿ ಎಂದು ರಮ್ಯಾ ಎಂದಿದ್ದಾರೆ. ಅಪ್ಪು ಅವರು ನನ್ನ ಮೊದಲ ಸ್ನೇಹಿತ ಮತ್ತು ನನ್ನ ಬೆಸ್ಟ್ ಕೋ ಸ್ಟಾರ್ ಎಂದು ಪುನೀತ್ ಅವರನ್ನ ರಮ್ಯಾ ನೆನಪು ಮಾಡಿಕೊಂಡಿದ್ದಾರೆ.