ಬೆಂಗಳೂರು: ಬಿಜೆಪಿ ಪ್ರಚಾರಕ್ಕೆ ಯಾರೇ ಬಂದರೂ ನನಗೆ ಆತಂಕ ಇಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಪ್ರಚಾರಕ್ಕೆ ಪ್ರಧಾನಿಯನ್ನಾದರೂ ಕರೆಸಲಿ, ಅಮೆರಿಕದ ಅಧ್ಯಕ್ಷರನ್ನಾದರೂ ಕರೆಸಲಿ. ನನಗೇನೂ ಆತಂಕ ಇಲ್ಲ.ಪ್ರಧಾನಿ ಕಾರ್ಯಕ್ರಮಕ್ಕೆ ಚನ್ನಪಟ್ಟಣ, ಮಂಡ್ಯ, ತುಮಕೂರು, ಮೈಸೂರಿನಿಂದ ಜನರನ್ನು ಕರೆಸಿಕೊಳ್ಳಬಹುದು. ಒಂದು ದಿನ ಜಾತ್ರೆ ಮಾಡಿ ಹೋಗಬಹುದು.
ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ… ಹೀಗೆ ಆಗಿದೆ ಅವರ ಕಥೆ. ಅದನ್ನು ಹೊರತುಪಡಿಸಿ ಜನಕ್ಕೆ ಅನುಕೂಲವಾಗುವ ಕಾರ್ಯಕ್ರಮ ಯಾವುದಾದರೂ ಮಾಡುತ್ತಾರಾ? ಚುನಾವಣೆ ಹೊತ್ತಿನಲ್ಲಿ ಬರುತ್ತಾರೆ, ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು. ಕಳೆದ ಹಲವು ತಿಂಗಳಿನಿಂದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದೇನೆ. ಕೇಂದ್ರ ಗೃಹಸಚಿವ ಅಮಿತ್ ಶಾ ರೋಡ್ ಶೋ ಗಮನಿಸಿದ್ದೇನೆ. ನಾನು ನಾಲ್ಕು ತಿಂಗಳಿನಿಂದ ನಡೆಸಿರುವ ರೋಡ್ ಶೋಗಳ ಮುಂದೆ ಇದೇನಲ್ಲ. ಜೆಡಿಎಸ್ನ ರೋಡ್ ಶೋಗಳಿಗೆ ಹೋಲಿಸಿದರೆ ಬಿಜೆಪಿ, ಕಾಂಗ್ರೆಸ್ನ ರೋಡ್ ಶೋಗಳು ಏನೇನು ಅಲ್ಲ ಎಂದು ಹೇಳಿದ್ದಾರೆ.