ಬೆಂಗಳೂರು: ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ರಾಜ್ಯ ರಾಜಕೀಯ ಇತಿಹಾಸದ ಬಗ್ಗೆ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Sivakumar) ಹೇಳಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಲಿಂಗಾಯತ ಮುಖ್ಯಮಂತ್ರಿಗಳಿಗೆ ತಮ್ಮ ಅವಧಿ ಪೂರ್ಣಗೊಳಿಸಲು ಅವಕಾಶ ನೀಡಿಲ್ಲ ಎಂಬ (AMITH SHA)ಅಮಿತ್ ಶಾ ಅವರ ಹೇಳಿಕೆ ಅಸಮಂಜಸ. ಅಮಿತ್ ಶಾ ಅವರಿಗೆ ರಾಜ್ಯ ರಾಜಕೀಯ ಇತಿಹಾಸದ(State Political History) ಬಗ್ಗೆ ಗೊತ್ತಿಲ್ಲ ಎಂದರು.
ನಾವು ಬಿಜೆಪಿಯವರಂತೆ ಯಾವುದೇ ಮುಖ್ಯಮಂತ್ರಿಯಿಂದ ಕಣ್ಣೀರು ಹಾಕಿಸಿಲ್ಲ. ಯಡಿಯೂರಪ್ಪ ಅವರು ಅಧಿಕಾರದಿಂದ ಕೆಳಗೆ ಇಳಿಯುವಾಗ ಯಾವ ಮಾತು ಆಡಿದ್ದಾರೆ. ಅದಕ್ಕೆ ಕಾರಣವೇನು? ಅವರಿಗೆ ಯಾವ ರೀತಿ ಬೆದರಿಕೆ ಹಾಕಲಾಗಿತ್ತು ಎಂಬ ವಿಷಯ ನನಗೆ ಗೊತ್ತಿದೆ. ಈಗ ಆ ವಿಚಾರವಾಗಿ ಮಾತನಾಡುವುದಿಲ್ಲ. ಬಿಜೆಪಿಗೆ ಯಡಿಯೂರಪ್ಪ ಅವರ ಕಣ್ಣೀರಿನ ಶಾಸ್ತಿ ಆಗಲಿದೆ. ಜಗದೀಶ್ ಶೆಟ್ಟರ್ ಹಾಗೂ ಸವದಿ ಅವರು ಕಣ್ಣೀರು ಹಾಕದಿರಬಹುದು.
ಅವರ ಮನಸ್ಸು ಅತ್ತಿದೆ ಎಂದು ಹೇಳಿದರು. ಬಿಜೆಪಿಯಲ್ಲಿ ಲಿಂಗಾಯತ ಮುಖ್ಯಮಂತ್ರಿ ವಿಚಾರವಾಗಿ ಜೋಶಿ ಅವರು ನಾವು ಆ ಘೋಷಣೆ ಮಾಡಿಲ್ಲ ಎಂದಿದ್ದಾರೆ ಎಂಬುದರ ಬಗ್ಗೆ ಕೇಳಿದಾಗ, ಅದು ಬಿಜೆಪಿ ಪಕ್ಷದ ದ್ವಂದ್ವ ನೀತಿ. ನಮ್ಮದು ಒಂದೇ ನೀತಿ ಅದು ಸಾಮೂಹಿಕ ನಾಯಕತ್ವದ ನೀತಿ. ಇದೇ ನಮ್ಮ ಬದ್ಧತೆ. ಚುನಾವಣಾ ಆಯೋಗದ ಅಧಿಕಾರಿಗಳು ಶಿವಕುಮಾರ್ ಅವರ ಹಿಂದೆ ಬಿದ್ದಿದ್ದಾರಾ ಎಂಬ ಪ್ರಶ್ನೆಗೆ, ರಾಜಕೀಯದಲ್ಲಿ ಇದೆಲ್ಲ ಸಹಜ. ಎಲ್ಲರನ್ನು ನಿಭಾಯಿಸಿಕೊಂಡು ಹೋಗಬೇಕು ಎಂದು ಹೇಳಿದ್ದಾರೆ.