ಹುಬ್ಬಳ್ಳಿ: ಯಡಿಯೂರಪ್ಪ (BS Yediyurappa) ನನ್ನ ಟಿಕೆಟ್ ಸಲುವಾಗಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಅವರು ಅಸಹಾಯಕರಾದರು. ಈಗ ನನ್ನ ಮೇಲೆ ಯಡಿಯೂರಪ್ಪ ಮಾಡಿರುವ ಟೀಕೆಗಳನ್ನು ಆಶೀರ್ವಾದ ಎಂದು ಭಾವಿಸುತ್ತೇನೆ. ಯಡಿಯೂರಪ್ಪ ಎಂಬ ಹಿರಿಯ ಮತ್ತು ಲಿಂಗಾಯತ ನಾಯಕರಿಂದ ನನ್ನ ಬೈಯಿಸಲಾಗುತ್ತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಆರೋಪ ಮಾಡಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಯಡಿಯೂರಪ್ಪ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸಲಾಗುತ್ತಿದೆ. ಇದೇ ಯಡಿಯೂರಪ್ಪನವರು ಕೆಜೆಪಿ ಕಟ್ಟಿದಾಗ ಬಸವರಾಜ ಬೊಮ್ಮಾಯಿ ಹೋಗಲಿಲ್ಲ ಅಂತ ಹಿಗ್ಗಾಮುಗ್ಗಾ ಬೈದಿದ್ದರು. ಆದರೆ ಬಸವರಾಜ ಬೊಮ್ಮಾಯಿಯವರು ಬಿಜೆಪಿಯಲ್ಲಿ (BJP) ಗೆಲುವು ಸಾಧಿಸಿದ್ದರು. ನಾನು ಕೂಡಾ ಅತಿ ಹೆಚ್ಚು ಲೀಡ್ನಿಂದ ಗೆಲುವು ಸಾಧಿಸುತ್ತೇನೆ. ಯಡಿಯೂರಪ್ಪ ಎಷ್ಟೇ ಬೈದರು ಅದು ಅವರ ಆಶೀರ್ವವಚನ ಎಂದು ಭಾವಿಸುತ್ತೆನೆ ಎಂದು ಹೇಳಿದರು.
ಒಬ್ಬ ಲಿಂಗಾಯತ ನಾಯಕನಿಂದ ಮತ್ತೊಬ್ಬ ಲಿಂಗಾಯತ ನಾಯಕನನ್ನು ಬೈಯಿಸಲಾಗುತ್ತಿದೆ. ಯಡಿಯೂರಪ್ಪನವರು ಅಸಹಾಯಕರಾಗಿದ್ದಾರೆ. ಯಡಿಯೂರಪ್ಪನವರು ರಕ್ತದಲ್ಲಿ ಬರೆದು ಕೊಡಲಿ ಅಥವಾ ಯಾವುದರಿಂದಾದಲೂ ಬರೆದು ಕೊಡಲಿ. ನೇರವಾಗಿ ಯುದ್ಧಕ್ಕೆ ಬರೋರು ನೀವೇ ಬನ್ನಿ, ಯಡಿಯೂರಪ್ಪರನ್ನು ಯಾಕೆ ನಡುವೆ ತರುತ್ತಿರಿ? 50-60 ಜನ ಲಿಂಗಾಯತರ ಜೊತೆಗೆ ಸೇರಿ ಸಭೆ ಮಾಡಿದರೆ ಇಡೀ ಲಿಂಗಾಯತ ಸಮುದಾಯದ ಸಭೆ ಆಗಲ್ಲ ಎಂದರು.
ಸೆಂಟ್ರಲ್ ಕ್ಷೇತ್ರ ಬರೀ ಹುಬ್ಬಳ್ಳಿ ಧಾರವಾಡಕ್ಕೆ ಸೀಮಿತವಲ್ಲಾ. ಇದು ರಾಷ್ಟ್ರೀಯ ಸೆಂಟ್ರಲ್ ಆಗಿದೆ. ಅಮಿತ್ ಶಾ ಹುಬ್ಬಳ್ಳಿ ಮತ್ತು ಯಾದಗಿರಿಯಲ್ಲಿ ಜಗದೀಶ್ ಶೆಟ್ಟರ್ ಸೋಲಿಸಬೇಕು ಅಂತ ಭಾಷಣ ಮಾಡುತ್ತಿದ್ದಾರೆ. ಸ್ಮೃತಿ ಇರಾನಿ, ಯಡಿಯೂರಪ್ಪ ಮತ್ತು ಜೆಪಿ ನಡ್ಡಾ ಸಹ ನನ್ನ ಸೋಲಿಸಲು ಕರೆ ನೀಡಿದ್ದಾರೆ. ನನ್ನ ಮೇಲೆ ಎಲ್ಲರೂ ಮುಗಿ ಬಿದ್ದಿದ್ದಾರೆ. ಈ ಬಡಪಾಯಿ ಮೇಲೆ ಯಾಕೆ ಎಲ್ಲರೂ ಬಿದ್ದಿದ್ದಾರೆ ಗೊತ್ತಿಲ್ಲ. ಇವರೆಲ್ಲರೂ ಸೇರಿ ಸೆಂಟ್ರಲ್ ಕ್ಷೇತ್ರವನ್ನು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದಾರೆ. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ್ದು ದೊಡ್ಡ ಅಪರಾಧವೆಂಬಂತೆ ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಬಿಜೆಪಿಗೆ ದ್ರೋಹ ಮಾಡಿದ್ದೆ ಎಂದು ಹೇಳುತ್ತಾರೆ. ಈ ಬಗ್ಗೆ ಮಾತನಾಡಲು ಯಾರಿಗೂ ನೈತಿಕತೆ ಇಲ್ಲ. ಜಗದೀಶ್ ಶೆಟ್ಟರ್ ಎಂದೂ ಪಕ್ಷ ದ್ರೋಹ ಮಾಡಿಲ್ಲ. ನಾನು ಎಂದೂ ಬಿಜೆಪಿಗೆ ಮೋಸ ಮಾಡಿಲ್ಲ ಎಂದರು.
ಇದೇ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಹರಿಹಾಯ್ದ ಶೆಟ್ಟರ್, ಧರ್ಮೇಂದ್ರ ಪ್ರಧಾನ್ ಕರೆ ಮಾಡಿದ ವೇಳೆಯಲ್ಲಿ ಜೋಶಿ ಕರೆದು ಮಾತನಾಡಬೇಕಿತ್ತು. ಆದರೆ ಎಲ್ಲಾ ಮುಗಿದ ಮೇಲೆ ಈಗ ಯಾಕೆ ಮಾತನಾಡುತ್ತಿರಿ? ಜೋಶಿ ಅವರೇ ಇದು ಬಹಳ ದಿನ ನಡೆಯೋದಿಲ್ಲ ಈ ರೀತಿಯ ರಾಜಕಾರಣ ನಡೆಯೋದಿಲ್ಲ. ಈ ರಾಜಕಾರಣ ಬಿಡಿ ಎಂದು ಕಿಡಿಕಾರಿದರು.
ಬಿಜೆಪಿಗರೇ ಏನು ನಿಮ್ಮ ಐಡಿಯಾ? ನಿನ್ನೆ ಮೊನ್ನೆ ಬಂದೋರಿಗೆ, ಕ್ರಿಮಿನಲ್ಗಳಿಗೆ ಟಿಕೆಟ್ ಕೊಟ್ಟಿದ್ದೀರಿ. ಒಂದು ಸಣ್ಣ ಟಿಕೆಟ್ ನಮಗೆ ಕೊಡಿಸೋಕೆ ಆಗಿಲ್ಲ. ನನಗೆ ಟಿಕೆಟ್ ಕೈ ತಪ್ಪಿದಾಗ ಯಾರು ನನ್ನ ಮಾತನಾಡಿಸಲಿಲ್ಲ. ನಾನು ರೆಬಲ್ ಆದಮೇಲೆ ರಾಜ್ಯಸಭಾ ಸದಸ್ಯ ಮಾಡುತ್ತೇವೆ, ಕೇಂದ್ರದಲ್ಲಿ ದೊಡ್ಡ ಹುದ್ದೆ ಕೊಡುತ್ತೇವೆ ಎಂದರು. ತತ್ವ ಮತ್ತು ಸಿದ್ಧಾಂತದ ಬಗ್ಗೆ ಮಾತನಾಡುವವರು, ಸಿಡಿ ಭಯದಿಂದ ಕೋರ್ಟ್ನಲ್ಲಿ ಸ್ಟೇ ತಂದೋರಿಗೆ, 80 ಪ್ರಕರಣಗಳಲ್ಲಿ ಭಾಗಿಯಾದವರಿಗೆ ಟಿಕೆಟ್ ನೀಡಿದ್ದಾರೆಂದು ಆರೋಪಿಸಿದರು.