ಚಳ್ಳಕೆರೆ : ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ತಂದೆ ಮಾಜಿ ಸಚಿವ ತಿಪ್ಪೇಸ್ವಾಮಿ ಯವರು ಮಾಡಿರುವ ಅಭಿವೃದ್ಧಿ ಕೆಲಸಗಳೇ ನನಗೆ ಶ್ರೀರಕ್ಷೆ ಎಂದು ಪಕ್ಷೇತರ ಅಭ್ಯರ್ಥಿ ಕೆಟಿ ಕುಮಾರಸ್ವಾಮಿ ಹೇಳಿದರು. ನಗರದ ಖಾಸಗಿ ಮನೆಯೊಂದರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ತಂದೆಯವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ, ಬಡವರ, ದೀನ ದಲಿತರ ಹಾಗೂ ಚಳ್ಳಕೆರೆ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಈಗಲೂ, ಕ್ಷೇತ್ರದ ಜನರು ಅವರು ಮಾಡಿರುವ ಕೆಲವು ಜನಪರ ಯೋಜನೆಗಳನ್ನು ಮರೆತಿಲ್ಲ. ಅವರಂತೆ ನಾನು ಸಹ,ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲು ಬದ್ಧನಿದ್ದೇನೆ.
ಈಗಾಗಲೇ ಕ್ಷೇತ್ರಾದ್ಯಂತ ಹಲವಾರು ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಯುವಕರು, ಮಹಿಳೆಯರು, ವೃದ್ಧರು ಸೇರಿದಂತೆ, ಎಲ್ಲ ಸಮುದಾಯದ ಬಾಂಧವರು ನನಗೆ ಬೆಂಬಲ ಸೂಚಿಸುತ್ತಿದ್ದು, ಸ್ಥಳೀಯ ಅಭ್ಯರ್ಥಿಯಾದ ನನ್ನನ್ನು ಈಬಾರಿಯ ಚುನಾವಣೆಯಲ್ಲಿ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು, ಸ್ವಯಂ ನಿವೃತ್ತ ತಹಶೀಲ್ದಾರ್ ಎನ್. ರಘುಮೂರ್ತಿ, ಮಾತನಾಡಿ, ನಾನು ಈ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸವ ಉದ್ದೇಶದಿಂದ, ಡಿಸೆಂಬರ್ ತಿಂಗಳಲ್ಲೇ ರಾಜೀನಾಮೆ ನೀಡಿದ್ದೆ. ಆದರೆ, ಕಾರಣಾಂತರದಿಂದ ನಾನು ಸ್ಪರ್ಧಿಸಲು ಸಾಧ್ಯವಾಗಿಲ್ಲ. ಹೀಗಾಗಿ,ಕೆ ಟಿ ಕುಮಾರಸ್ವಾಮಿಯವರಿಗೆ ಬೆಂಬಲ ನೀಡುವ ಮೂಲಕ, ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದರು. ಇದೆ ವೇಳೆ, ರೈತ ಸಂಘದ ಮುಖಂಡ ರೆಡ್ಡಿಹಳ್ಳಿ ವೀರಣ್ಣ, ಶಿವಪುತ್ರಪ್ಪ, ಬಂಡೆ ರಂಗಸ್ವಾಮಿ, ಮೋಹನ್ ಕುಮಾರ್ ಸೇರಿದಂತೆ, ಹಲವು ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವರದಿ :ಪುರ್ಲೆಹಳ್ಳಿ ಹನುಮಂತರಾಜು, ಚಳ್ಳಕೆರೆ