ಹೊಸದಿಲ್ಲಿ: ಮುಂಬೈ ಇಂಡಿಯನ್ಸ್ ಕಪ್ತಾನ ರೋಹಿತ್ ಶರ್ಮಾ ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಿಂದ ವಿರಾಮ ತೆಗೆದುಕೊಳ್ಳಬೇಕು. ಆ ಮೂಲಕ 2023ರ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ಫ್ರೆಷ್ ಆಗಿ ಆಗಮಿಸಬೇಕೆಂದು ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಸಲಹೆ ನೀಡಿದ್ದಾರೆ.
ಮಂಗಳವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ 208 ರನ್ ಗುರಿ ಹಿಂಬಾಲಿಸಿದ್ದ ಮುಂಬೈ ಇಂಡಿಯನ್ಸ್ ತಂಡ 152 ರನ್ಗಳಿಗೆ ಸೀಮಿತವಾಗಿತ್ತು. ಆ ಮೂಲಕ 56 ರನ್ಗಳಿಂದ ಸೋಲು ಅನುಭವಿಸಿತು. ಇನಿಂಗ್ಸ್ ಆರಂಭಿಸಿದ್ದ ರೋಹಿತ್ ಶರ್ಮಾ 8 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.
ಪಂದ್ಯದ ಬಳಿಕ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಮಾತನಾಡಿದ ಸುನೀಲ್ ಗವಾಸ್ಕರ್, ರೋಹಿತ್ ಶರ್ಮಾ ಐಪಿಎಲ್ ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ವಿರಾಮ ಪಡೆಯಬೇಕು ಹಾಗೂ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ಫ್ರೆಶ್ ಮೈಂಡ್ನಲ್ಲಿ ಆಗಮಿಸಬೇಕು ಎಂದು ಸಲಹೆ ನೀಡಿದ್ದಾರೆ.
“ರೋಹಿತ್ ಶರ್ಮಾ ಬ್ರೇಕ್ ಪಡೆದುಕೊಂಡು ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ಫ್ರೆಶ್ ಆಗಿ ಮರಳಬೇಕು. ಕಳೆದ ಕೆಲ ಪಂದ್ಯಗಳಲ್ಲಿ ಅವರು ತಮ್ಮ ಫಾರ್ಮ್ಗೆ ಕಮ್ಬ್ಯಾಕ್ ಮಾಡಿದ್ದರು. ಆದರೆ, ಈಗ ಅವರು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಅವರು ಬಹುಶಃ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. ನನಗೆ ಅನಿಸಿದ ಹಾಗೆ ಅವರು ಸ್ವಲ್ಪ ವಿರಾಮ ಪಡೆಯಬೇಕಾದ ಅಗತ್ಯವಿದೆ,” ಎಂದು ಸ್ಟಾರ್ ಸ್ಪೋರ್ಟ್ಸ್ಗೆ ತಿಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದಲ್ಲಿ ಯಾವ ಬೌಲರ್ ಮಾಡಿದ್ದ ತಪ್ಪುಗಳನ್ನು ಪದೇ-ಪದೆ ಮಾಡುತ್ತಿದ್ದಾರೆ, ಅಂತಹ ಬೌಲರ್ಗಳನ್ನು ಪ್ಲೇಯಿಂಗ್ XIನಿಂದ ಕೈ ಬಿಡಬೇಕು. ಆ ಮೂಲಕ ಅವರು ಕಠಿಣ ಪರಿಶ್ರಮ ಪಟ್ಟು ತಮ್ಮ ತಪ್ಪುಗಳನ್ನು ತಿದ್ದಿಕೊಂಡು ತಂಡಕ್ಕೆ ಮರಳಬೇಕು ಎಂದು ಇದೇ ವೇಳೆ ಬ್ಯಾಟಿಂಗ್ ದಿಗ್ಗಜ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಈ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಪ್ಲೇಆಫ್ಸ್ಗೆ ಅರ್ಹತೆ ಪಡೆಯಬೇಕೆಂದರೆ ಪವಾಡ ನಡೆಯಬೇಕು. ಅಂತಿಮ ನಾಲ್ಕರ ಘಟ್ಟಕ್ಕೆ ಮುಂಬೈ ಇಂಡಿಯನ್ಸ್ ಅರ್ಹತೆ ಪಡೆಯಬೇಕೆಂದರೆ, ಅವರು ಹೆಚ್ಚುವರಿ ಪ್ರದರ್ಶನವನ್ನು ತೋರಬೇಕಾಗುತ್ತದೆ,” ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.
“ಮಾಡಿದ್ದ ತಪ್ಪುಗಳನ್ನು ಯಾರು ಮುಂದುವರಿಸುತ್ತಿದ್ದಾರೆ, ಅವರಿಗೆ ಧನ್ಯವಾದ ಹೇಳುವುದು ಒಳ್ಳೆಯದು. ಅವರು ಕೆಲ ಪಂದ್ಯಗಳಿಗೆ ವಿರಾಮ ಪಡೆದು, ತಾವು ಎಲ್ಲಿ ಎಡವುತ್ತಿದ್ದೇವೆಂದು ಪತ್ತೆ ಹಚ್ಚಿ, ಅದನ್ನು ತಿದ್ದಿಕೊಂಡು ತಂಡಕ್ಕೆ ಮರಳಬೇಕು,” ಎಂದು ಭಾರತ ತಂಡದ ಮಾಜಿ ನಾಯಕ ತಿಳಿಸಿದ್ದಾರೆ.