ಕೆ.ಆರ್.ಪುರ : ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಹಾಗಾಗಿ ಅಭ್ಯರ್ಥಿಗಳು ಮತದಾರರ ಗಮನ ಸೆಳೆಯಲು ಬೇರೆ ಬೇರೆ ರೀತಿಯಲ್ಲಿ ಪ್ರಚಾರದ ಭರಾಟೆ ಶುರು ಮಾಡಿದ್ದಾರೆ. ಅದರಂತೆ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಮೋಹನ್ ಬಾಬು ಕೂಡಾ ಅಬ್ಬರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಇಂದು ಅಧಿಕೃತವಾಗಿ ಪ್ರಚಾರ ಆರಂಭಿಸಿದ ಕೆ.ಆರ್.ಪುರ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಮೋಹನ್ ಬಾಬು,ಕೆ.ಆರ್.ಪುರನ ಭಟ್ಟರಹಳ್ಳಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಸೇರಿ ವಿಷೇಶ ಪೂಜೆ ಸಲ್ಲಿಸಿದರು.ಭಟ್ಟರಹಳ್ಳಿಯಿಂದ ಆರಂಭವಾದ ದೇವಸಂದ್ರದ ತ್ರಿವೇಣಿ ನಗರದವರೆಗೆ ಭರ್ಜರಿ ಮತಯಾಚನೆ ಮಾಡಿದರು.
ಪ್ರತಿ ಗ್ರಾಮದಲ್ಲೂ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ತಿಳಿಸುತ್ತಾ, ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಮತ ನೀಡಬೇಕು ಎಂಬುದನ್ನು ಸಾರ್ವಜನಿಕರಿಗೆ ಮನಮರಿಕೆ ಮಾಡಿಕೊಟ್ಟರು . ಈ ಹಿಂದೆ ಕಾಂಗ್ರೆಸ್ ಪಕ್ಷ ಭದ್ರಕೋಟೆಯಾಗಿದ್ದ ಕೆ.ಆರ್.ಪುರ ಕ್ಷೇತ್ರವನ್ನು ಮರಳಿ ನಮ್ಮ ಹತೋಟಿಗೆ ಪಡೆದುಕೊಳ್ಳಬೇಕೆಂದು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ .ನಂತರ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಬಾಬು, ವಿಧಾನಸಭೆ ವಿರೋಧ ಪಕ್ಷದ ನಾಯಕ
ಸಿದ್ದರಾಮಯ್ಯನವರು ಮಾಡಿರುವ ಅಭಿವೃದ್ಧಿ ಯೋಜನೆಗಳು ನಮಗೆ ಶ್ರಿರಕ್ಷೆಯಾಗಿದೆ.ಕಾಂಗ್ರೆಸ್ ಯಾವತ್ತೂ ಬಡವರ ಪರವಾಗಿದೆ.ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು ಜನ ಬದುಕಲು ಪರದಾಡುತ್ತಿದ್ದಾರೆ ಎಂದು ತಿಳಿಸಿದರು.
ಪ್ರತಿ ಗ್ರಾಮಗಳಿಗೆ ಭೇಟಿ ನೀಡಿದಾಗಲೂ ನಮಗೆ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಬೆಂಬಲ ನೀಡುತ್ತಿರುವುದು ತುಂಬ ಸಂತೋಷವಾಗಿದೆ.ಕಳೆದ 10 ವರ್ಷಗಳ ಕಾಲ ಅಭಿವೃದ್ಧಿ ಕಾಣದೇ ಕ್ಷೇತ್ರದ ಮತದಾರರು ಬದಲಾವಣೆ ಬಯಸುತ್ತಿದ್ದಾರೆ ಎಂದು ತಿಳಿಸಿದರು.
ನೂರಾರು ಕಾರ್ಯಕರ್ತರೊಂದಿಗೆ ಜ್ಯೋತಿನಗರ, ಮೇಡಹಳ್ಳಿ, ಪಾರ್ವತಿ ನಗರ, ವೈಟ್ ಸಿಟಿ, ಸೀಗೆಹಳ್ಳಿ, ಚಿಕ್ಕಬಸವನಪುರ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಮತ ಪ್ರಚಾರ ನಡೆಸುತ್ತಿದ್ದಾರೆ . ಇದೇ ವೇಳೆ ಮತ ಪ್ರಚಾರಕ್ಕೆ ಆಗಮಿಸಿದ ಮೋಹನ್ ಬಾಬು ಅವರಿಗೆ ಅಭಿಮಾನಿಗಳು, ಕಾರ್ಯಕರ್ತರು ಬೃಹತ್ ಸೇಬಿನ ಹಾಗೂ ಹೂವಿನ ಹಾರ ಹಾಕುವ ಮೂಲಕ ಸ್ವಾಗತಿಸಿದ್ದಾರೆ ..