ಬೆಂಗಳೂರು: ಬೆಂಗಳೂರಿನ ಸಿಸಿಬಿ ಪೊಲೀಸರು ಭರ್ಜರಿ(CCB operation) ಕಾರ್ಯಾಚರಣೆ ನಡೆಸಿ, ಅಂತರಾಷ್ಟ್ರೀಯ ಕರೆಗಳನ್ನ (International calls)ಸ್ಥಳೀಯ ಕರೆಗಳಾಗಿ ಮಾರ್ಪಾಡು ಮಾಡುತ್ತಿದ್ದ ಖತರ್ನಾಕ್ ಕಿಲಾಡಿಯೊಬ್ಬನನ್ನು ಅರೆಸ್ಟ್ ಮಾಡಿದ್ದಾರೆ. ಹೆಬ್ಬಗೋಡಿಯ ಮನೆಯೊಂದರಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಮುಸ್ತಫಾ ಎನ್ನುವಾತ ಈ ಕೃತ್ಯ ನಡೆಸಿದ್ದು, ಕೇರಳ ಮೂಲದವನು ಎಂದು ತಿಳಿದು ಬಂದಿದೆ. ಈತ ವಾಯ್ಸ್ಓವರ್ ಇಂಟರ್ನೆಟ್ ಪ್ರೋಟೋಕಾಲ್ ನಿಂದ ಕರೆ ಬದಲಾಯಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿದ್ದ. ಹೆಬ್ಬಗೋಡಿಯ ಮನೆಯಿಂದ ಒಟ್ಟು 6 ಸಿಮ್ ಬಾಕ್ಸ್ಗಳನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಒಂದು ಸಿಮ್ ಬಾಕ್ಸ್ ನಲ್ಲಿ ಏಕಕಾಲದಲ್ಲಿ 250 ಕ್ಕೂ ಹೆಚ್ಚು ಅಂತರಾಷ್ಟ್ರೀಯ ಕರೆಗಳನ್ನು ಲೋಕಲ್ ಕಾಲ್ಗಳಾಗಿ ಕನ್ವರ್ಟ್ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ. ಸದ್ಯ ಸಿಸಿಬಿ ಪೊಲೀಸರು ಆರೋಪಿ ಮುಸ್ತಫಾಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈತ ದುಬೈ ಹಾಗೂ ಪಾಕಿಸ್ತಾನದ ಕಾಲ್ ಗಳನ್ನ ಕನ್ವರ್ಟ್ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಈತ ಟೆರರಿಸಂನಲ್ಲೂ ಕೈ ಆಡಿಸಿರುವ ಶಂಕೆ ಬಲವಾಗಿದೆ.