ಧಾರವಾಡ: ಕಾಂಗ್ರೆಸ್ 70 ವರ್ಷಗಳ ಅವಧಿಯಲ್ಲಿ ಈ ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಉಳಿಸಿಕೊಂಡು ಬಂದಿದೆ. ಹೀಗಾಗಿಯೇ ಮೋದಿ ಈ ದೇಶದ ಪ್ರಧಾನಿಯಾಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಧಾರವಾಡದ ಕಡಪಾ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಹಮ್ಮಿಕೊಂಡಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಸದ್ಯ ರಾಜ್ಯದಲ್ಲಿ ಬಂದಿರುವ ಚುನಾವಣೆ ದೇಶದ ಭವಿಷ್ಯವನ್ನು ಬದಲಾಯಿಸುವ ಚುನಾವಣೆ. ಬಿಜೆಪಿ ಆಡಳಿತ ಎಂದರೆ ಅದು ಕಮೀಷನ್ ಆಡಳಿತ ಎನ್ನುವಂತಾಗಿದೆ. ಶೇ.40 ಕೊಟ್ಟರೆ ಎಲ್ಲ ಕೆಲಸ ಆಗುತ್ತಿದ್ದವು. ಶಿಕ್ಷಣ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳ ಕೆಲಸಕ್ಕೂ ಹಣ ಕೊಡದೇ ಯಾವುದೇ ಕೆಲಸಗಳು ಈ ಸರ್ಕಾರದ ಅವಧಿಯಲ್ಲಿ ಆಗಲಿಲ್ಲ. ಗುತ್ತಿಗೆದಾರರ ಬಿಲ್ ಕೂಡ ಇದುವರೆಗೂ ಕ್ಲಿಯರ್ ಆಗಿಲ್ಲ. ಇದನ್ನು ಸ್ವತಃ ಗುತ್ತಿಗೆದಾರರೇ ರಾಷ್ಟ್ರಪತಿ ಹಾಗೂ ಪ್ರಧಾನಿ ಸೇರಿದಂತೆ ಹಲವರಿಗೆ ಪತ್ರ ಬರೆದಿದ್ದಾರೆ ಎಂದರು.
ಕಮೀಷನ್ ಆರೋಪಕ್ಕೆ ಮೋದಿ ಹಾಗೂ ಅಮಿತ್ ಶಾ ಅವರು ಪ್ರೂಫ್ ಕೇಳುತ್ತಾರೆ. ಮೋದಿ ತಾನು ತಿನ್ನುವುದಿಲ್ಲ ತಿನ್ನುವವರಿಗೂ ಬಿಡೋದಿಲ್ಲ ಎನ್ನುತ್ತಾರೆ. ಆದರೆ, ಮೋದಿ ಅವರು ತಿನ್ನುವವರನ್ನೇ ತಮ್ಮ ಬಳಿ ಕುಳ್ಳಿರಿಸಿಕೊಂಡಿದ್ದಾರೆ. ಆದರೆ, ಅವರ ಬಗ್ಗೆ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದರು.
70 ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಎಲ್ಲರಿಗೂ ಸಮಾನ ಹಕ್ಕು ನೀಡಿದೆ. ಗಾಂಧಿ ಕುಟುಂಬದಲ್ಲಿ ರಾಜೀವ ಗಾಂಧಿ ನಂತರ ಯಾರೂ ಮಂತ್ರಿಯಾಗಿಲ್ಲ. ಸಾಂವಿಧಾನಿಕ ಹುದ್ದೆಯನ್ನು ಯಾರೂ ಪಡೆದಿಲ್ಲ. ಹೀಗಿದ್ದರೂ ಬಿಜೆಪಿವರು ಗಾಂಧಿ ಪರಿವಾರದಿಂದ ದೂರ ಇರಿ ಎಂದು ಹೇಳುತ್ತಾರೆ. ಇಂದು ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರುತ್ತಲೇ ಇದೆ. ಇದು ಡಬಜ್ ಎಂಜಿನ್ ಸರ್ಕಾರದ ಕಾರ್ಯವೈಖರಿ. ಬಿಜೆಪಿಯವರದ್ದು ಒಡೆದು ಆಳುವ ನೀತಿ ಎಂದು ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದರು.